
ಉಡುಪಿ: ಶ್ರೀ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನವೆಂಬರ್ 28 ರಂದು ನಡೆಯಲಿರುವ ಬೃಹತ್ ಗೀತೋತ್ಸವದ ನಿಮಿತ್ತದ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂದು ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ರಜೆಯನ್ನು ಅಂಗನವಾಡಿ, ಎಲ್ಲಾ ಶಾಲಾ-ಕಾಲೇಜುಗಳು ಮತ್ತು ಸರಕಾರಿ ಕಚೇರಿಗಳು ಸೇರಿದಂತೆ ಜಿಲ್ಲಾದ್ಯಂತ ಒಂದು ದಿನದ ಮಟ್ಟಿಗೆ ಘೋಷಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಪ್ರಧಾನಿಯವರ ಭೇಟಿ ಅಧಿಕೃತಗೊಂಡ ಹಿನ್ನೆಲೆಯಲ್ಲಿ ಶ್ರೀ ಕೃಷ್ಣಮಠದಲ್ಲಿ ಸಿದ್ಧತಾ ಪ್ರಕ್ರಿಯೆ ಇನ್ನಷ್ಟು ಚುರುಕುಗೊಂಡಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ಮತ್ತು ವೇದಿಕೆ ನಿರ್ಮಾಣ ಪ್ರಗತಿಯಲ್ಲಿದ್ದು, ಮುಂದಿನ ಎರಡು ದಿನಗಳಲ್ಲಿ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಎಸ್‌ಪಿಜಿ (SPG) ಅಧಿಕಾರಿಗಳು ಬಂದು ಭದ್ರತಾ ಪರಿಶೀಲನೆ ನಡೆಸಲಿದ್ದು, ಅದಕ್ಕೆ ಅನುಗುಣವಾಗಿ ಕೆಲವು ಸಣ್ಣಪುಟ್ಟ ಬದಲಾವಣೆಗಳು ಆಗಬಹುದು. ಜಿಲ್ಲಾಡಳಿತದಿಂದಲೂ ರಸ್ತೆ ಸ್ವಚ್ಛತೆ, ರಸ್ತೆ ನಿರ್ಮಾಣ ಕಾಮಗಾರಿ ಮತ್ತು ಭದ್ರತೆ ಪರಿಶೀಲನೆ ಸೇರಿದಂತೆ ಮೂಲ ಸೌಕರ್ಯ ಸುಧಾರಣೆಗೆ ಸಂಬಂಧಿಸಿದ ಕಾಮಗಾರಿಗಳು ವೇಗ ಪಡೆದಿವೆ. ಜಿಲ್ಲಾಡಳಿತವು ಎಲ್ಲಾ ಮಾಹಿತಿಗಳನ್ನೂ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ನಿಯಮಿತವಾಗಿ ನೀಡುತ್ತಿದೆ.













