
ಬೆಂಗಳೂರು: ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಹಾಲು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಮತ್ತು ಪೌಷ್ಟಿಕಾಂಶ ಹೆಚ್ಚಿಸಲು, ಬಮೂಲ್ ನೂತನ ನಿರ್ದೇಶಕ ಡಿ.ಕೆ. ಸುರೇಶ್ ಅವರು ಶಾಲಾ ಮಕ್ಕಳಿಗೆ ‘ಫ್ಲೇವರ್ಡ್’ ನಂದಿನಿ ಹಾಲು ಪೂರೈಸುವ ಮಹತ್ವದ ಪ್ರಸ್ತಾಪವನ್ನು ಶಾಲಾ ಶಿಕ್ಷಣ ಇಲಾಖೆಯ ಮುಂದಿಟ್ಟಿದ್ದಾರೆ.
ಯೋಜನೆಯ ರೂಪುರೇಷೆ:
ಮಕ್ಕಳಿಗೆ ಚಾಕೊಲೇಟ್, ಬಾದಾಮಿ, ಸ್ಟ್ರಾಬೆರಿ ಸೇರಿದಂತೆ ವಿವಿಧ ಫ್ಲೇವರ್‌ಗಳ ಹಾಲನ್ನು ಟೆಟ್ರಾ ಪ್ಯಾಕೇಟ್‌ಗಳಲ್ಲಿ ನೇರವಾಗಿ ಪೂರೈಸಲು ಡಿಕೆ ಸುರೇಶ್ ಶಿಕ್ಷಣ ಇಲಾಖೆಯೊಂದಿಗೆ ಪ್ರಾಯೋಗಿಕ ಯೋಜನೆಯ ಪ್ರಸ್ತಾಪವನ್ನು ಮಂಡಿಸಿದ್ದಾರೆ. ಪ್ರಸ್ತುತ ಮಕ್ಕಳಿಗೆ ನೀಡುತ್ತಿರುವ ಪೌಡರ್ ರೂಪದ ಹಾಲು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದರಿಂದ ಮಕ್ಕಳಿಗೆ ಸರಿಯಾಗಿ ಹಾಲು ಸಿಗುತ್ತಿಲ್ಲ ಎಂಬ ಆರೋಪವಿದೆ. ಇದನ್ನು ತಪ್ಪಿಸಲು ನೇರ ಹಾಲು ಪೂರೈಕೆ ಮಾಡುವುದು ಬಮೂಲ್ ನಿರ್ದೇಶಕರ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಾಮಾನ್ಯ ಹಾಲಿನ ದರಕ್ಕೆ ಟೆಟ್ರಾ ಪ್ಯಾಕೆಟ್‌ಗಳಲ್ಲಿ ಗುಣಮಟ್ಟದ ಫ್ಲೇವರ್ಡ್ ಹಾಲು ಪೂರೈಸಲು ಬಮೂಲ್ ಸಿದ್ಧವಿದೆ ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಚರ್ಚೆ:
ಶಾಲಾ ಮಕ್ಕಳಿಗೆ ಫ್ಲೇವರ್ಡ್ ಹಾಲು ಪೂರೈಸುವ ಬಗ್ಗೆ ಡಿ.ಕೆ. ಸುರೇಶ್ ಅವರು ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ವಿಚಾರವಾಗಿ ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಗ್ರೀನ್‌ಸಿಗ್ನಲ್ ನೀಡಿದರೆ, ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ಪೂರೈಕೆಯಾಗಲಿದೆ.
ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್‌ಗೆ ಚಿಂತನೆ:
ಬಮೂಲ್ ನಿರ್ದೇಶಕರಾಗಿ ಆಯ್ಕೆಯಾದ ಬೆನ್ನಲ್ಲೇ ಡಿ.ಕೆ. ಸುರೇಶ್, ನಂದಿನಿ ಹಾಲಿನ ಪ್ಯಾಕೇಟ್‌ಗಳಿಗೆ ಹೊಸ ರೂಪ ನೀಡುವ ಬಗ್ಗೆ ಚಿಂತನೆ ನಡೆಸಿದ್ದರು. ಸದ್ಯ ಪಾಲಿಥಿನ್ ಪ್ಯಾಕೆಟ್‌ಗಳಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿದ್ದು, ವಿದೇಶಗಳಲ್ಲಿ ಬಳಕೆಯಲ್ಲಿರುವ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆಗೆ ಚಿಂತನೆ ನಡೆಸಿದ್ದಾರೆ. ನೂತನ ತಂತ್ರಜ್ಞಾನದಡಿ ತಯಾರಿಸಲಾಗುವ ಈ ಬಯೋಡಿಗ್ರೇಡೇಬಲ್ ಪ್ಯಾಕೆಟ್‌ಗಳು ಕೇವಲ 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ. ಈಗಾಗಲೇ ನಕಪುರದ ಶಿವನಹಳ್ಳಿಯಲ್ಲಿ ಈ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆಯ ಪ್ರಾಯೋಗಿಕ ಕಾರ್ಯ ಈ ತಿಂಗಳಿನಿಂದಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ.