
ಉಡುಪಿ: ಕರಾವಳಿ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ, ಸಮುದ್ರದಲ್ಲಿ ಮೀನುಗಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಸೂಚನೆ ನೀಡಿದ್ದಾರೆ. ಮೀನುಗಾರಿಕೆಗೆ ಹೊರಡುವಾಗ ಎರಡು ಅಥವಾ ಮೂರು ದೋಣಿಗಳ ಗುಂಪಿನಲ್ಲಿ ಸಾಗಬೇಕೆಂದು ಸೂಚನೆ ನೀಡಿದ್ದಾರೆ.
ಮಧ್ಯ ಸಮುದ್ರದಲ್ಲಿ ಮರಳು ದಂಡೆಗಳು ಅಥವಾ ಅಪರಿಚಿತ ದ್ವೀಪಗಳಲ್ಲಿ ಯಾವುದೇ ವ್ಯಕ್ತಿಗಳ ಚಲನವಲನ ಕಂಡು ಬಂದಲ್ಲಿ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಮೀನುಗಾರಿಕೆ ವೇಳೆ ಲಂಗರು ಹಾಕುವಾಗ ದೋಣಿಗಳ ನ್ಯಾವಿಗೇಶನ್ ದೀಪಗಳನ್ನು ಆನ್ ಮಾಡುವುದು ಕಡ್ಡಾಯ.
ಭದ್ರತಾ ಪಡೆಗಳ ತಪಾಸಣೆ ವೇಳೆ ಸಂಪೂರ್ಣ ಸಹಕಾರ ನೀಡಬೇಕು. ಜೊತೆಗೆ, ಕ್ಯೂಆರ್ ಕೋಡ್ ಪರವಾನಗಿ, ಆಧಾರ್ ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ತಮ್ಮೊಂದಿಗೆ ಇಡುವಂತೆ ಸೂಚಿಸಲಾಗಿದೆ.
ಯಾವುದೇ ಅನುಮಾನಾಸ್ಪದ ಸಂದರ್ಭ ಎದುರಾದರೆ ಮೀನುಗಾರರು ಸಮುದ್ರಕ್ಕೆ ಇಳಿಯದೆ ಹಿಂದಿರುಗಬೇಕು ಎಂದು ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.