
ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಪ್ರದೇಶದಲ್ಲಿ ಹಳೆ ವಿವಾದದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಿಕ್ಕಿ ರೈ ಅವರ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳಿಂದ ಫೈರಿಂಗ್ ನಡೆದಿದ್ದು, ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಗಾಯಗೊಂಡ ರಿಕ್ಕಿಯನ್ನು ತಕ್ಷಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ರಿಕ್ಕಿಯ ಕಾರು ಚಾಲಕ ಬಸವರಾಜು ಅವರಿಂದ ನೀಡಲಾದ ದೂರಿನಲ್ಲಿ, ರಿಕ್ಕಿಯ ಎರಡನೇ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಮತ್ತು ನಿತೇಶ್ ಶೆಟ್ಟಿ , ವೈದ್ಯನಾಥನ್ ವಿರುದ್ಧ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ, ಈ ಹಿಂದೆ ರಿಯಲ್ ಎಸ್ಟೇಟ್ ಸಂಬಂಧಿತ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿರುವ ಶಂಕೆ ಇದೆ. ಮುತ್ತಪ್ಪ ರೈ ಮೃತಪಟ್ಟಾಗಿನಿಂದ ಅವರ ಕುಟುಂಬದಲ್ಲಿ ಆಸ್ತಿ ವಿವಾದ ನಡೆಯುತ್ತಲೇ ಇದೆ. ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ವಿರುದ್ಧ ಕೆಲವರು ಸಂಚು ರೂಪಿಸುತ್ತಿದ್ದರು ಎಂದು ಅವರ ಪರ ವಕೀಲ ನಾರಾಯಣಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದರೆ, ಯಾವ ವಿಚಾರಕ್ಕೆ ಗುಂಡಿನ ದಾಳಿ ನಡೆದಿದೆ ಎಂಬುದು ಇನ್ನು ಖಚಿತವಾಗಿ ತಿಳಿದುಬಂದಿಲ್ಲ. ಮುತ್ತಪ್ಪ ರೈ ಜೀವಿತದಲ್ಲಿದ್ದಾಗಲೇ ರಿಕ್ಕಿ ರೈ ಅವರು ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅವರು ವಿದೇಶದ ಮಹಿಳೆಯನ್ನು ಮದುವೆಯಾಗಿದ್ದು, ಇದೀಗ ಅವರ ಎರಡನೇ ಪತ್ನಿ ಮತ್ತು ಮಗು ವಿದೇಶದಲ್ಲೇ ವಾಸಿಸುತ್ತಿದ್ದಾರೆ. ರಿಕ್ಕಿ ರೈ ಕೂಡಾ ಬಹುಪಾಲು ಸಮಯ ವಿದೇಶದಲ್ಲೇ ಕಳೆದಿದ್ದರು ಎನ್ನಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವ ರಿಕ್ಕಿ ರೈಗೆ ಈಗಾಗಲೇ ಎರಡು ಶಸ್ತ್ರ ಚಿಕಿತ್ಸೆಗಳು ನಡೆದಿದೆ. ಹ್ಯಾಂಡ್ ಸರ್ಜರಿ ಮಾಡಿರುವ ವೈದ್ಯರು, ಗಾಯಗೊಂಡಿರುವ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.
ಈ ದಾಳಿಯ ಹಿಂದೆ ನಿಖರ ಕಾರಣ ಏನೆಂಬುದನ್ನು ಪೊಲೀಸರು ತನಿಖೆ ಮೂಲಕ ತಿಳಿಯಬೇಕಿದೆ.