
ಮಂಗಳೂರು: ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಿಕಾ ಕಂಪನಿಯಲ್ಲಿ ಬುಧವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ಕಂಪನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸುಗಂಧ ದ್ರವ್ಯದಿಂದ ಬೆಂಕಿಯ ತೀವ್ರತೆ ಹೆಚ್ಚಳ
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಎಂಸಿಎಫ್, ಎನ್ಎಂಪಿಎ, ಮತ್ತು ಕದ್ರಿಯ ಅಗ್ನಿಶಾಮಕ ದಳಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದವು. ಆದರೆ, ಸುಗಂಧ ದ್ರವ್ಯಗಳು ಹೆಚ್ಚು ದಹನಶೀಲ ವಸ್ತುವಾಗಿರುವುದರಿಂದ ಬೆಂಕಿ ಏಕಾಏಕಿ ಧಗಧಗನೆ ಉರಿದಿದೆ, ಇದರಿಂದಾಗಿ ನಾಶ , ನಷ್ಟದ ಪ್ರಮಾಣ ಹೆಚ್ಚಾಗಿದೆ.
ಈ ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವನ್ನು ಪರಿಶೀಲಿಸಲಾಗುತ್ತಿದೆ.