
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ವೈದ್ಯೆಯೊಬ್ಬರು ದೇಶ ವಿರೋಧಿ ಹಾಗೂ ಧರ್ಮ ನಿಂದನೆಯ ಶಬ್ದಗಳನ್ನು ಒಳಗೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಹಂಚಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯೂ ಇವರನ್ನು ಕೆಲಸದಿಂದ ವಜಾ ಮಾಡಿದೆ.
ಅಫೀಫ ಫಾತಿಮಾ ಎನ್ನುವ ವೈದ್ಯೆ ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, “Help stinky Hindus behind me” ಮತ್ತು “Am I Indian – Yes, Do I hate India – Yes” ಎಂಬ ದೇಶಕ್ಕೆ ಧಕ್ಕೆ ತರುವ, ಧರ್ಮವನ್ನು ನಿಂದಿಸುವ ಪೋಸ್ಟ್ ಹಂಚಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ನಂತರ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಹಿಂದೂ ಸಂಘಟನೆಗಳೂ ತೀವ್ರ ವಿರೋಧ ವ್ಯಕ್ತಪಡಿಸಿದವು.
ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಗೆ ಹಲವು ಸಾರ್ವಜನಿಕರು ದೂರು ನೀಡಿದ್ದಾರೆ. ಪೊಲೀಸರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪೋಸ್ಟ್ ವಿವಾದದ ತೀವ್ರತೆಯನ್ನು ಮನಗಂಡ ಆಸ್ಪತ್ರೆಯ ಆಡಳಿತ ಮಂಡಳಿಯೂ ಕೂಡ ತಕ್ಷಣ ಕ್ರಮ ಕೈಗೊಂಡಿದ್ದು, ಅಫೀಫ ಫಾತಿಮಾವನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆಸ್ಪತ್ರೆಯ HR ವಿಭಾಗವೂ ತಾನು ದೂರು ದಾಖಲಿಸಿರುವುದಾಗಿ ತಿಳಿಸಿದೆ.