
ಬೆಂಗಳೂರು: ಪಹಲ್ಲಾಂ ಗಲಭೆಗೆ ಕನ್ನಡಿಗರನ್ನು ಹೋಲಿಸಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಠಿಣ ನಿರ್ಣಯ ತೆಗೆದುಕೊಂಡಿದೆ. ಸೋನು ನಿಗಮ್ ಹೇಳಿಕೆ ಕನ್ನಡಿಗರ ಭಾವನೆಗೆ ಆಘಾತ ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ.
ಸೋಮವಾರ (ಮೇ 5) ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ನರಸಿಂಹುಲು ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖರಾಗಿ ಸಂಗೀತ ನಿರ್ದೇಶಕ ಧರ್ಮವಿಶ್, ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್, ಗಾಯಕಿ ಶಮಿತಾ ಮಲ್ನಾಡ್, ಮಂಡಳಿಯ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಸೋನು ನಿಗಮ್ ವಿರುದ್ಧ ತಾತ್ಕಾಲಿಕವಾಗಿ ಅಸಹಕಾರ ತೋರಲು ತೀರ್ಮಾನಿಸಲಾಗಿದೆ.
ನರಸಿಂಹುಲು ಸ್ಪಷ್ಟನೆ ನೀಡುತ್ತಾ: “ಸೋನು ನಿಗಮ್ ನೀಡಿದ ಹೇಳಿಕೆ ಅಕ್ಷಮ್ಯ. ಅವರು ಮತ್ತೊಮ್ಮೆ ಲೈವ್ ಮೂಲಕ ಸಮರ್ಥನೆ ನೀಡಿದ್ದಾರೆ. ಇದನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ. ಮುಂದಿನಿಂದ ಅವರಿಗೆ ಯಾವುದೇ ಚಲನಚಿತ್ರ, ಲೈವ್ ಶೋ ಅಥವಾ ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮದಲ್ಲಿ ಅವಕಾಶ ಕೊಡಬಾರದು ಎಂಬ ನಿರ್ಣಯ ಕೈಗೊಳ್ಳಲಾಗಿದೆ,” ಎಂದು ಹೇಳಿದರು.
ಇದೊಂದೇ ಅಲ್ಲ, ಮುಂದೆ ಅವರನ್ನು ಪೂರ್ಣವಾಗಿ ನಿಷೇಧಿಸಬೇಕೆಂದು ಚರ್ಚೆ ನಡೆಸಲು ನಿರ್ಧರಿಸಲಾಗಿದೆ. “ಯಾರಾದರೂ ಅವರೊಂದಿಗೆ ಕೆಲಸ ಮಾಡಿದರೆ, ಅವರ ಮೇಲೂ ಕ್ರಮಕೈಗೊಳ್ಳಲಾಗುತ್ತದೆ,” ಎಂದು ಉಗ್ರ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚೆಗೆ ಬಿದರಹಳ್ಳಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಸೋನು ನಿಗಮ್ ಅವರಿಂದ ಕನ್ನಡ ಹಾಡು ಕೇಳಿದ್ದ. ಇದಕ್ಕೆ ಸಿಟ್ಟುಮಾಡಿಕೊಂಡ ಗಾಯಕ, “ಕನ್ನಡ, ಕನ್ನಡ.. ಇದೇ ಕಾರಣದಿಂದ ಪಹಲ್ಲಾಂನಲ್ಲಿ ಗಲಭೆ ನಡೆದಿದೆ,” ಎಂದು ಹೇಳಿದ್ದರು. ಈ ಹೇಳಿಕೆ ಕನ್ನಡಿಗರಲ್ಲಿ ಭಾರಿ ಆಕ್ರೋಶವನ್ನುಂಟುಮಾಡಿದೆ. ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅವರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಒಂದು ವಾರದೊಳಗೆ ಸ್ಪಷ್ಟನೆ ನೀಡಬೇಕೆಂದು ಸೂಚಿಸಲಾಗಿದೆ.