
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ನರ್ಸನ್ನು ಆರೋಗ್ಯ ಇಲಾಖೆ ಅಮಾನತುಪಡಿಸಿದೆ. 7 ವರ್ಷದ ಬಾಲಕನ ಕೆನ್ನೆ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಬಳಸಿ ಕಳುಹಿಸಿದ್ದ ಅಮಾನವೀಯ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಈ ಸಂಬಂಧ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡು, ಪ್ರಾಥಮಿಕ ವರದಿ ಆಧಾರದಲ್ಲಿ ನರ್ಸ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ವೈದ್ಯಕೀಯ ಬಳಕೆಗೆ ಅನುಮೋದಿತವಲ್ಲದ ಫೆವಿಕ್ವಿಕ್ ಬಳಸಿರುವುದು ಕರ್ತವ್ಯ ಲೋಪವೆಂದು ತಿಳಿದು ಬಂದಿದೆ. ತೊಂದರೆಗೊಳಗಾದ ಬಾಲಕನ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದ್ದು, ಯಾವುದೇ ಗಂಭೀರ ಪರಿಣಾಮವಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.