
ಪಾಟ್ನಾ: ಪಹಲ್ಗಾಂ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಪ್ರಾರಂಭಿಸಿದ ‘ಆಪರೇಷನ್ ಸಿಂಧೂರ’ ಭದ್ರತಾ ಕಾರ್ಯಾಚರಣೆ ದೇಶಾದ್ಯಂತ ರಾಷ್ಟ್ರ ಭಕ್ತಿಯ ತೀವ್ರ ಜ್ವಾಲೆ ಉರಿಯಿಸುತ್ತಿದ್ದಂತೆಯೇ, ಬಿಹಾರದ ಕತಿಹಾರ್‌ನಲ್ಲಿ ಜನಿಸಿದ ಪುಟ್ಟ ಹೆಣ್ಣುಮಗುವಿಗೆ ‘ಸಿಂಧೂರ’ ಎಂಬ ಹೆಸರಿಡಲಾಗಿದೆ.
ಕತಿಹಾರ್‌ನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಸೇನೆಯ ಆಪರೇಷನ್ ನಡೆದ ದಿನವೇ ಮಗು ಜನಿಸಿತು. ಇದರಿಂದ ಪ್ರೇರಿತರಾದ ಮಗುವಿನ ತಂದೆ, “ಭಾರತೀಯ ಸೇನೆಯ ಧೈರ್ಯ ಮತ್ತು ಬದ್ಧತೆಯ ಸ್ಮರಣಾರ್ಥ ನಾನು ನನ್ನ ಮಗುವಿಗೆ ‘ಸಿಂಧೂರ’ ಎಂಬ ಹೆಸರಿಟ್ಟಿದ್ದೇನೆ. ಇದು ನನ್ನ ದೇಶದ ಪ್ರೇಮದ ಚಿಕ್ಕ ಸಂಕೇತ,” ಎಂದು ಭಾವುಕರಾಗಿ ತಿಳಿಸಿದ್ದಾರೆ.
ಸೇನೆಯ ಕಾರ್ಯಾಚರಣೆಗೆ ಜನಮನದಿಂದ ಕೃತಜ್ಞತೆ
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾರತದ ಸೇನೆ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಪ್ರಮುಖ ನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ ಈ ಆಪರೇಷನ್‌ಗೆ ‘ಸಿಂಧೂರ’ ಎಂಬ ಹೆಸರನ್ನು ನೀಡಿದ್ದರು. ಈ ಹೆಸರೇ ಇದೀಗ ನವಜಾತ ಶಿಶುವಿಗೆ ನಾಮಧೇಯವಾಗಿ ಬದಲಾಗಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.