
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗರಿಗೆರೆಡ್ಡಿಪಾಳ್ಯ ನಿವಾಸಿಗಳಾಗಿರುವ ಮಾರಪ್ಪ, ಅವರ ಮಗಳು ದೇವಮ್ಮ, ಮೊಮ್ಮಗ ಆಂಜಿ, ಜೊತೆಗೆ ಅವರ ಕಾರಿನಲ್ಲಿ ಇದ್ದ ಆದಿನಾರಾಯಣ ಹಾಗೂ ವೆಂಕಟರಮಣ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಅಕ್ರಮವಾಗಿ ಗಾಂಜಾ ವ್ಯಾಪಾರ
ರಾತ್ರೋರಾತ್ರಿ ಶ್ರೀಮಂತರಾಗುವ ಆಸೆಯಿಂದ ಇವರು ಮಾದಕ ವಸ್ತುಗಳ ಅಕ್ರಮ ವ್ಯಾಪಾರಕ್ಕೆ ಕೈಹಾಕಿದ್ದು, ಮಹಿಂದ್ರಾ ಎಕ್ಸ್‌ಯುವಿ 500 ಕಾರಿನಲ್ಲಿ ₹17.50 ಲಕ್ಷ ಮೌಲ್ಯದ 35 ಕೆಜಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇತಿಹಾಸ ಉಳ್ಳ ಅಪರಾಧಿಗಳು
ಬಂಧಿತರ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಾಂಜಾ ಮಾರಾಟ ಹಾಗೂ ಸಾಗಾಟ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಜೈಲಿಗೆ ಹೋಗಿ ಮತ್ತೆ ಜಾಮೀನು ಮೇಲೆ ಹೊರ ಬಂದು ಮತ್ತೆ ಅದೇ ಕೆಲಸವನ್ನು ಮುಂದುವರೆಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಹಿಂದಿನ ಅಪರಾಧ ರಿಕಾರ್ಡ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದು, ಗಾಂಜಾ ಮಾಫಿಯಾದ ಮೂಲ ಮತ್ತು ಸಂಪರ್ಕಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.