
ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿದ್ದ ಬಂಡೆಗೆ ಡಿಕ್ಕಿ ಹೊಡೆದ ಕಾರು 500 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಶಿಕ್ಷಕರಾದ ರಾಜೇಶ್ (40), ಅವರ ಪತ್ನಿ ಹನ್ಸೊ (36), ಮಗ ದೀಪಕ್ (15), ಮಗಳು ಆರತಿ (17), ಸಹೋದರ ಮಾವ ಹೇಮರಾಜ್ (37), ಹಾಗೂ ಇನ್ನೊಬ್ಬ ವ್ಯಕ್ತಿ ರಾಕೇಶ್ (44) ಎಂದು ಗುರುತಿಸಲಾಗಿದೆ.
ಬನಿಖೇತ್‌ನಿಂದ ತಮ್ಮ ಊರಿಗೆ ವಾಪಸ್ಸಾಗುತ್ತಿದ್ದಾಗ, ಮನೆಗೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಬೆಟ್ಟದಿಂದ ಉರುಳಿಬಿದ್ದ ಬಂಡೆ ಕಲ್ಲು ಕಾಣದೆ ಕಾರು ಡಿಕ್ಕಿ ಹೊಡೆದಿದೆ. ಈ ಘಟನೆ ರಾತ್ರಿ ಸುಮಾರು 9:30ರ ಸುಮಾರಿಗೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದರೂ, ಕಾರಿನಲ್ಲಿದ್ದವರು ಅಷ್ಟರಲ್ಲೇ ಮೃತಪಟ್ಟಿದ್ದರು. ಕಂದಕದ ಆಳದ ಕಾರಣದಿಂದಾಗಿ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ತಂಡಕ್ಕೆ ಸುಮಾರು ಆರು ಗಂಟೆಗಳ ಕಾಲ ಬೇಕಾಯಿತು.