
ಕಾರ್ಕಳ: ಫೆಬ್ರವರಿ 3ರ ಮಧ್ಯಾಹ್ನ ಕಾರ್ಕಳ ಶಿವತಿಕೆರೆಯ ನಡುಬೀದಿಯಲ್ಲೇ ನಡೆದ ಮಾರಣಾಂತಿಕ ಹಲ್ಲೆ ಜನರಲ್ಲಿ ಆತಂಕ ಮೂಡಿಸಿದೆ. ಜೋಡುರಸ್ತೆ ನಿವಾಸಿ ಮಹಮ್ಮದ್ ರಿಜ್ವಾನ್ ಅವರನ್ನು ಆತನ ಪತ್ನಿಯ ಅಣ್ಣ ಅಶ್ರಫ್ ರೆಂಜಾಳ ಕತ್ತಿಯಿಂದ ಕಡಿದು ತಲೆ, ಕುತ್ತಿಗೆ ಮತ್ತು ಕಾಲಿಗೆ ಗಂಭೀರ ಗಾಯಗೊಳಿಸಿದ್ದಾನೆ. ರಿಜ್ವಾನ್ ಅವರನ್ನು ತಕ್ಷಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಅಶ್ರಫ್ ರಿಜ್ವಾನ್ ಅವರನ್ನು ಕಾರ್ಕಳ ಬೈಪಾಸ್ ರಸ್ತೆಯ ಶಿವತಿಕೆರೆಗೆ ಕರೆಸಿಕೊಂಡು, ಕಾರಿನಿಂದ ಇಳಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಗಾಯಾಳುವನ್ನು ಆಟೋದಲ್ಲಿ ಕುಳ್ಳಿರಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.
ತಂಗಿಯ ಆತ್ಮಹತ್ಯೆ ಹಿನ್ನೆಲೆಯೇ ಹಲ್ಲೆ?
2017ರಲ್ಲಿ ಅಶ್ರಫ್‌ನ ತಂಗಿ ಮೈಮುನಾ, ಜೋಡುರಸ್ತೆಯ ಮಹಮ್ಮದ್ ರಿಜ್ವಾನ್ ಅವರನ್ನು ಮದುವೆಯಾಗಿದ್ದರು. ಆದರೆ ಗಂಡನ ಮನೆಯವರ ಹಿಂಸೆ ಮತ್ತು ಕಿರುಕುಳ ತಾಳಲಾರದೇ ಕಳೆದ ನವೆಂಬರ್ 28ರಂದು ಮೈಮುನಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಡಿಸೆಂಬರ್ 2ರಂದು ಅವರು ಮೃತಪಟ್ಟಿದ್ದರು.
ಮೈಮುನಾ ಸಾವಿಗೆ ಸಂಬಂಧಿಸಿ ಅತ್ತೆ ನೂರ್‌ಜಾನ್, ಮಾವ ಮೊಹಮ್ಮದ್ ಶರೀಪ್, ಸಿರಾಜ್, ಸಿರಾಜ್‌ನ ಹೆಂಡತಿ ರಫಾತ್, ಅಬ್ದುಲ್ ಖಾದರ್, ಮಜೀದ್, ಮೆಹರುನ್ನಿಸಾ ಮತ್ತು ದಿಲ್‌ಷಾದ್ ಎಂಬವರು ಮಾನಸಿಕ ಹಿಂಸೆ ನೀಡಿದ ಕುರಿತು ಮೈಮುನಾ ಅಕ್ಕ ರಶೀದಾ ಬಾನು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.