
ನವದೆಹಲಿ: ಹೆದ್ದಾರಿ ಬಳಕೆದಾರರ ದೀರ್ಘಕಾಲದ ಟೋಲ್ ಶುಲ್ಕದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ, ಅಂದರೆ ಆಗಸ್ಟ್ 15, 2025 ರಿಂದ, ರಾಷ್ಟ್ರೀಯ ಹೆದ್ದಾರಿಗಳಲ್ಲಿ “ಫಾಸ್ಟ್ಯಾಗ್ ವಾರ್ಷಿಕ ಪಾಸ್” ಅನ್ನು ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಹೊಸ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್, ₹3,000 ಬೆಲೆಗೆ 200 ಟ್ರಿಪ್‌ಗಳಿಗೆ ಅನ್ವಯಿಸಲಿದೆ. ಕಾರು, ಜೀಪ್ ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಇದು ಲಭ್ಯವಿರಲಿದೆ. ದುಬಾರಿ ಟೋಲ್ ಶುಲ್ಕಗಳಿಂದ ಮುಕ್ತಿ ನೀಡುವುದು, ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ಮತ್ತು ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು, ಹಾಗೂ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಪಾಸ್ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಎಕ್ಸ್‌ಪ್ರೆಸ್‌ವೇಗಳು ಅಥವಾ ರಾಜ್ಯ ಹೆದ್ದಾರಿಗಳಲ್ಲಿ ಇದು ಅನ್ವಯಿಸುವುದಿಲ್ಲ.
ಫಾಸ್ಟ್ಯಾಗ್ ವಾರ್ಷಿಕ ಪಾಸ್, ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ರಾಷ್ಟ್ರೀಯ ಹೆದ್ದಾರಿ ಟ್ರಿಪ್‌ಗಳನ್ನು ಪೂರ್ಣಗೊಳಿಸುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ದೇಶದ ಯಾವುದೇ ರಾಷ್ಟ್ರೀಯ ಹೆದ್ದಾರಿ ಅಥವಾ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದು ಟೋಲ್ ಪ್ಲಾಜಾವನ್ನು ದಾಟುವುದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುವುದು, ಮತ್ತು ಒಂದು ಸುತ್ತಿನ ಪ್ರಯಾಣವನ್ನು (ಹೋಗಿ-ಬರುವುದು) ಎರಡು ಟ್ರಿಪ್‌ಗಳೆಂದು ಲೆಕ್ಕ ಹಾಕಲಾಗುತ್ತದೆ. ಒಂದು ವರ್ಷದೊಳಗೆ 200 ಟ್ರಿಪ್‌ಗಳು ಮುಗಿದರೆ, ಹೊಸ ವಾರ್ಷಿಕ ಪಾಸ್ ಅನ್ನು ನವೀಕರಿಸಬಹುದು.
ಈ ಪಾಸ್ ‘ರಾಜಮಾರ್ಗ ಯಾತ್ರೆ’ ಮೊಬೈಲ್ ಅಪ್ಲಿಕೇಶನ್ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. NHAI ಶೀಘ್ರದಲ್ಲೇ ಇದಕ್ಕಾಗಿ ಮೀಸಲಾದ ಲಿಂಕ್ ಅನ್ನು ಬಿಡುಗಡೆ ಮಾಡಲಿದೆ. ವಾಹನದ ಅರ್ಹತೆ ಮತ್ತು ಸಂಬಂಧಿತ ಫಾಸ್ಟ್‌ಟ್ಯಾಗ್ ಅರ್ಹತೆಯ ಪರಿಶೀಲನೆ ಯಶಸ್ವಿಯಾದ ಬಳಿಕ, ಬಳಕೆದಾರರು ₹3,000 ಪಾವತಿಸಿ ಫಾಸ್ಮಾಗ್‌ನಲ್ಲಿ ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಬಹುದು.