
ಮೈಸೂರು : ಕನ್ನಡ ಚಿತ್ರರಂಗದಲ್ಲಿ ತಮ್ಮ ಹಾಸ್ಯದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಚಿಕ್ಕಣ್ಣ, ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಅವರ ಜೊತೆ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದೆ. ಎರಡೂ ಕುಟುಂಬದವರು ಈ ಕುರಿತು ಮಾತುಕತೆ ನಡೆಸಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರಳವಾಗಿ ನೆರವೇರಿದ ಶಾಸ್ತ್ರ:
ಪಾವನಾ ಮತ್ತು ಚಿಕ್ಕಣ್ಣ ಅವರ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರವು ಸರಳವಾಗಿ ನೆರವೇರಿದೆ. ಈ ಖಾಸಗಿ ಕಾರ್ಯಕ್ರಮದಲ್ಲಿ ಎರಡು ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚಿಕ್ಕಣ್ಣ ಮತ್ತು ಪಾವನಾ ಅವರ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ನಿಗದಿಯಾಗಬೇಕಿದೆ:
ಚಿಕ್ಕಣ್ಣ ಅವರು ಪ್ರಸ್ತುತ ತಮ್ಮ ಚಿತ್ರಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈಗಾಗಲೇ ವೈವಾಹಿಕ ಸಂಬಂಧ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭದ ದಿನಾಂಕಗಳನ್ನು ಎರಡೂ ಕುಟುಂಬದ ಹಿರಿಯರು ಕುಳಿತು ಶೀಘ್ರದಲ್ಲಿಯೇ ಅಂತಿಮಗೊಳಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಚಿಕ್ಕಣ್ಣನ ವೃತ್ತಿಜೀವನ:
41 ವರ್ಷದ ಚಿಕ್ಕಣ್ಣ, 2011ರಲ್ಲಿ ಯಶ್ ನಟನೆಯ ‘ಕಿರಾತಕ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಹಲವು ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಹಾಸ್ಯ ನಟನೆಯಿಂದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಇತ್ತೀಚೆಗೆ ‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕನಾಗಿಯೂ ಯಶಸ್ಸು ಕಂಡರು. ನಾಯಕನಾಗಿ ಅವರ ನಟನೆಗೆ ಮತ್ತು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವರ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭ ಹಾರೈಸುತ್ತಿದ್ದಾರೆ.