
ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಿಕಂದರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಭಾನುವಾರ ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಚಿತ್ರದ ತಂಡ ಉಪಸ್ಥಿತರಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಸಲ್ಮಾನ್ ಮತ್ತು ರಶ್ಮಿಕಾ ನಡುವಿನ 31 ವರ್ಷದ ವಯಸ್ಸಿನ ಅಂತರದ ಕುರಿತು ನಟ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಟ್ರೇಲರ್ ಲಾಂಚ್ ವೇಳೆ, ಸಲ್ಮಾನ್ ಖಾನ್ ಅವರ ವಯಸ್ಸು 59 ವರ್ಷ, ರಶ್ಮಿಕಾ 28 ವರ್ಷದ ನಟಿಯಾಗಿದ್ದು, ಈ ವಯಸ್ಸಿನ ಅಂತರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಮಾತನಾಡಿದ ಸಲ್ಮಾನ್ –”ನಾಯಕಿಗೂ, ಅವರ ಕುಟುಂಬಕ್ಕೂ ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಿರುವಾಗ ನಿಮಗೇಕೆ? ಜನರು ಈ ವಿಷಯವನ್ನು ಅನಾವಶ್ಯಕವಾಗಿ ದೊಡ್ಡ ವಿಷಯವಾಗಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಹೀಗೇ ಮುಂದುವರಿದು, “ರಶ್ಮಿಕಾ ಮುಂದಿನ ದಿನಗಳಲ್ಲಿ ಮದುವೆಯಾಗಿ ಮಕ್ಕಳನ್ನು ಹೊಂದಿದರೂ, ನಾನು ಆಕೆಯ ಮಗಳ ಜೊತೆ ನಟಿಸುತ್ತೇನೆ! ಆದರೆ ಆಗ ಆಕೆಯ ತಾಯಿಯ ಅನುಮತಿ ಬೇಕಾಗಬಹುದು!” ಎಂದು ರಶ್ಮಿಕಾ ಮುಖ ನೋಡಿ ನಗುತ್ತಾ ಹೇಳಿದರು. ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದೌದು ಎಂಬಂತೆ ರಶ್ಮಿಕಾ ಮಂದಣ್ಣ ಹಿಂದೆ ನಿಂತು ತಲೆಯಾಡಿಸಿದ್ದಾರೆ.
ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಎ.ಆರ್. ಮುರುಗದಾಸ್ ಅವರ ಈ ಬಹುನಿರೀಕ್ಷಿತ ಚಿತ್ರ ಈ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.