
ಹಿರಿಯಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕಿನ ಹಿರಿಯಡ್ಕ ವಲಯ ಮತ್ತು ಪಂಚನಬೆಟ್ಟು ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಶ್ರೀ ವಾಸುದೇವ ಭಟ್ ನೆಕ್ಕರಪಲ್ಕೆ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು. ಶ್ರೀಯುತ ಸುರೇಂದ್ರ ನಾಯ್ಕ್ (ಮಾನ್ಯ ಯೋಜನಾಧಿಕಾರಿ, ಧರ್ಮಸ್ಥಳ ಯೋಜನೆ – ಉಡುಪಿ)ಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯದ ಅಧ್ಯಕ್ಷ ಗಣೇಶ್ ನಾಯ್ಕ್ ಗಿಡ ನಾಟಿ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರಾಯೋಗಿಕವಾಗಿ ಮಾದರಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ವಲಯದ ಸಾಮಾಜಿಕ ಅರಣ್ಯಾಧಿಕಾರಿ ಶ್ರೀಮತಿ ಅನುಷಾ ಭಟ್ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ಮತ್ತು ಸಂರಕ್ಷಣೆಯ ಕುರಿತು ಪ್ರಭಾವಶಾಲಿ ಮಾಹಿತಿ ನೀಡಿದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ , ಟ್ರಸ್ಟ್ ಕಾರ್ಯದರ್ಶಿ ಸಂತೋಷ್ ಕಾಮತ್, ಶಾಲಾ ಆಡಳಿತ ಮಂಡಳಿಯ ವಿಶ್ವನಾಥ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶೇಷವಾಗಿ, ಶಾಲೆಗೆ ಅಗತ್ಯವಾಗಿದ್ದ ಸೌಂಡ್ ಸಿಸ್ಟಮ್ ಅನ್ನು ಶ್ರೀಮತಿ ರಾಧಾ ಎಚ್. ಪುರಾಣಿಕ್ (ಕಾರ್ಕಳ)ರವರು ದೇಣಿಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯಡ್ಕ ವಲಯ ಮೇಲ್ವಿಚಾರಕರಾದ ರಾಜ್ ಸರ್ ನೆರವೇರಿಸಿದರು ಮತ್ತು ಕೃಷಿ ಮೇಲ್ವಿಚಾರಕರಾದ ಮಂಜುನಾಥ್ ಸ್ವಾಗತ ಭಾಷಣ ಮಾಡಿದರು . ಕೊನೆಗೆ ಶಾಲಾ ಕಾರ್ಯನಿರ್ವಾಹಕ ನರಸಿಂಹ ನಾಯಕ್ ಧನ್ಯವಾದ ಸಲ್ಲಿಸಿದರು.