
ಕಣಂಜಾರು : ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಣಂಜಾರು ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್ ಅವರ ಸಹಯೋಗದಲ್ಲಿ ಜೂನ್ 15, 2025ರ ಭಾನುವಾರ, ಮಿಥುನ ಸಂಕ್ರಾಂತಿಯ ಪವಿತ್ರ ದಿನದಂದು ‘ವಿಶ್ವ ಪರಿಸರ ದಿನಾಚರಣೆ’ ಯ ಅಂಗವಾಗಿ “ಪರಿಸರ ಪೂಜನೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಂಜಾರಿನಲ್ಲಿ ಭಕ್ತಿ ಭಾವಪೂರ್ಣವಾಗಿ ಆಚರಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಹಿರಿಯರು , ಪರಿಸರ ಸ್ನೇಹಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪರಿಸರದ ಮಹತ್ವ ಮತ್ತು ಹಸಿರು ಭೂಮಿಯ ರಕ್ಷಣೆಯ ಕುರಿತು ಮಾತನಾಡಿದ ಸಂಘಟಕರು, ನೆರೆದವರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ, ಪರಿಸರದ ಹಿತಕ್ಕಾಗಿ ಭಾಗವಹಿಸಿದ ಪ್ರತಿಯೊಬ್ಬರಿಗೆ ಹಲಸು, ಹೆಬ್ಬಲಸು, ತೇಗ, ರಾಮಪತ್ರೆ ಮತ್ತು ಇಜಿನ್ ಸೇರಿದಂತೆ ಹಸಿರು ಗಿಡಗಳನ್ನು ಉಚಿತವಾಗಿ ವಿತರಿಸುವ ಮೂಲಕ ತಮ್ಮ ಮನೆಯ ಪರಿಸರವನ್ನು ಹಸಿರು-ಸಿರಿಯಾಗಿ ಬೆಳೆಸುವ ಸಂಕಲ್ಪ ಮಾಡಲು ಪ್ರೋತ್ಸಾಹಿಸಲಾಯಿತು.
ಪರಿಸರ ಉಳಿಸಿ, ಭವಿಷ್ಯ ಸುರಕ್ಷಿತಗೊಳಿಸಿ, ಪರಿಸರವೇ ದೇವರು – ಅದನ್ನು ಪೂಜಿಸೋಣ, ಉಳಿಸೋಣ ಎಂಬ ಘೋಷಣೆಯೊಂದಿಗೆ ನಡೆದ ಈ ಕಾರ್ಯಕ್ರಮ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮತ್ತು ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ಕಾಪಾಡಬೇಕಾದ ಹೊಣೆಗಾರಿಕೆಯ ಭಾವನೆ ಉಂಟುಮಾಡುವಲ್ಲಿ ಯಶಸ್ವಿಯಾಯಿತು.