
ಕಾರ್ಕಳ: ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡು ಆತಂಕ ಸೃಷ್ಟಿಸಿದ್ದ ಕಾರ್ಕಳದ ಮಹತ್ವದ ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ನಾಯಕ ಶ್ರೀ ಉದಯ ಶೆಟ್ಟಿ ಮುನಿಯಾಲು ಅವರ ಸತತ ಪ್ರಯತ್ನದ ಫಲವಾಗಿ ಇಂದು ಬೆಳಿಗ್ಗೆ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಿದೆ. ಇದರಿಂದಾಗಿ ಕೃಷಿ ಭೂಮಿಗೆ ನೀರು ಹರಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪುನಾರಂಭಗೊಂಡಿದೆ.
ತ್ವರಿತ ಕ್ರಮ ಕೈಗೊಂಡ ನಾಯಕರು: ಯೋಜನೆಯ ವಿದ್ಯುತ್ ಸಂಪರ್ಕ ಕಡಿತಗೊಂಡು ರೈತರು ಕಂಗಾಲಾಗಿದ್ದನ್ನು ಗಮನಿಸಿದ ಉದಯ ಶೆಟ್ಟಿ ಮುನಿಯಾಲು ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ದಿನೇಶ್ ಗುಂಡೂರಾವ್ ಹಾಗೂ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ತುರ್ತು ಮನವಿ ಸಲ್ಲಿಸಿದರು.
ಸಮಸ್ಯೆಯ ಗಂಭೀರತೆಯನ್ನು ಅರಿತ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇತ್ತ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು ವಿಶೇಷ ಆಸಕ್ತಿ ವಹಿಸಿ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರಿಂದ ಇಂದು ಬೆಳಿಗ್ಗೆಯಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ರೈತರಲ್ಲಿ ಹರ್ಷ: ಇಂದು ಬೆಳಿಗ್ಗೆಯಿಂದ ಆಣೆಕಟ್ಟು ಮೋಟಾರ್‌ಗಳು ಕಾರ್ಯಾರಂಭ ಮಾಡಿದ್ದು, ನದಿಯಿಂದ ನೀರನ್ನು ಎತ್ತಿ ಕೆರೆಗಳಿಗೆ ಹರಿಸಲಾಗುತ್ತಿದೆ. ಬೇಸಿಗೆಯ ಆರಂಭದಲ್ಲೇ ನೀರು ಲಭ್ಯವಾಗಿರುವುದು ಈ ಭಾಗದ ರೈತರಲ್ಲಿ ಸಂತಸ ತಂದಿದೆ.
ಶಾಸಕರ ವಿರುದ್ಧ ಕಿಡಿ: ಈ ಬಗ್ಗೆ ಪ್ರತಿಕ್ರಿಯಿಸಿದ ಉದಯ ಶೆಟ್ಟಿ ಮುನಿಯಾಲು, “ರೈತರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಪ್ರತಿಭಟನೆ ನಡೆಸುವುದು ಅವರ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ. ರಾಜಕೀಯ ಮಾಡುವುದಾದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ರಾಜಕೀಯ ಮಾಡಲಿ” ಎಂದು ವಾಗ್ದಾಳಿ ನಡೆಸಿದರು.



































