
ನವದೆಹಲಿ: ಎಲಾನ್ ಮಸ್ಕ್ ಅವರ XAI ಕಂಪನಿಯ “ಗ್ರೋಕ್” ಎಐ ಚಾಟ್‌ಬಾಟ್ ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಖಾರ ಭಾಷೆ, ಅಸಭ್ಯ ಪದಪ್ರಯೋಗ ಹಾಗೂ ರಾಜಕೀಯ ನಾಯಕರು, ಸರ್ಕಾರದ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಂದ ಈ ಚಾಟ್‌ಬಾಟ್ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಭಾರತದಲ್ಲಿ ನಿಷೇಧ ಸಾಧ್ಯತೆ ಎದುರಿಸುತ್ತಿದೆ.
ರಾಜಕೀಯ ಅಸಮಾಧಾನ ಮತ್ತು ವಿವಾದ:
ಗ್ರೋಕ್ ಚಾಟ್‌ಬಾಟ್ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಮತ್ತು ಹಲವು ರಾಜಕೀಯ ಮುಖಂಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಈ ಏಐ ಮೋದಿಯವರ ಸಂದರ್ಶನಗಳು ಸ್ಕ್ರಿಪ್ಟೆಡ್ ಆಗಿವೆ ಎಂದು ಹೇಳಿದರೆ, ರಾಹುಲ್ ಗಾಂಧಿ ಹೆಚ್ಚು ಪ್ರಾಮಾಣಿಕರು, ಉತ್ತಮ ಶಿಕ್ಷಣ ಹೊಂದಿದ್ದಾರೆ ಎಂದು ಬಣ್ಣಿಸಿದೆ. ಈ ಹೇಳಿಕೆ BJP ನಾಯಕರ ಆಕ್ರೋಶ ಮೂಡಿಸಿದೆ.
ಕೇಂದ್ರ ಸರ್ಕಾರದ ಕ್ರಮ:
ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಕೇಂದ್ರ ಸರ್ಕಾರ ಗ್ರೋಕ್ ಅನ್ನು ನಿಷೇಧಿಸುವ ಸಾಧ್ಯತೆ ಇದೆ. ಭಾರತ ಸರ್ಕಾರ ಐಟಿ ಕಾಯ್ದೆಯ ಸೆಕ್ಷನ್ 79(3)(B)ಯನ್ನು ಪ್ರಶ್ನಿಸುತ್ತಿದ್ದು, ಈ ನಿಯಮ ಅನಿಯಂತ್ರಿತ ಸೆನ್ಸಾರ್‌ಶಿಪ್ ಗೆ ಕಾರಣವಾಗುತ್ತಿದೆ ಎಂದು ಎಲಾನ್ ಮಸ್ಕ್ ಅವರ XAI ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಎಲಾನ್ ಮಸ್ಕ್ ಪ್ರತಿಕ್ರಿಯೆ:
ಈ ವಿವಾದದ ಬಗ್ಗೆ BBC ವರದಿ ಪ್ರಕಟವಾಗುತ್ತಿದ್ದಂತೆ, ಮಸ್ಕ್ ನಗುವ ಎಮೋಜಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆ ವೈರಲ್ ಆಗಿದ್ದು, ನೆಟ್ಟಿಗರು ಮಸ್ಕ್‌ನ್ನು ‘ಗಾಸಿಪ್ ಮಾಡುವ ಚಿಕ್ಕಮ್ಮ’ ಎಂದು ತಮಾಷೆ ಮಾಡುತ್ತಿದ್ದಾರೆ.
ಅಮೆರಿಕದಲ್ಲಿ ಭಾರೀ ದೋಷ:
ಅಮೆರಿಕದಲ್ಲಿ ಗ್ರೋಕ್ 3 ಬಳಕೆದಾರರ ಪ್ರಶ್ನೆಗಳಿಗೆ ವಿವಾದಾತ್ಮಕ ಉತ್ತರ ನೀಡಿದೆ. ಕೆಲವು ಸಂದರ್ಭಗಳಲ್ಲಿ ಪ್ರಚೋದನಕಾರಿ ಉತ್ತರ ನೀಡಿ, ತಪ್ಪು ಮಾಹಿತಿಯನ್ನು ಹರಡಿರುವುದು ದಾಖಲಾಗಿದೆ. AI ಚಾಟ್‌ಬಾಟ್‌ಗಳು ಹಾನಿಕಾರಕ ಸಲಹೆ ನೀಡಿದ ಘಟನೆಗಳು ಇನ್ನಷ್ಟು ಚರ್ಚೆಗೆ ಗ್ರಾಸವಾಗಿವೆ.
ಭಾರತದಲ್ಲಿ AI ನಿಯಂತ್ರಣ ಕಾನೂನುಗಳು ಕಠಿಣಗೊಳ್ಳುತ್ತಿವೆಯೇ? ಈ ವಿವಾದದ ನಂತರ ಭಾರತದಲ್ಲಿ AI ನಿಯಂತ್ರಣ ಮತ್ತಷ್ಟು ಗಟ್ಟಿಯಾಗಬಹುದೆಂಬ ಸಾಧ್ಯತೆ ಎದುರಾಗಿದೆ.