
ಹೆಬ್ರಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ಮುಟ್ಲುಪಾಡಿಯಲ್ಲಿ ಇದೀಗ ಆನೆಯ ಹಾವಳಿ ಶುರುವಾಗಿದೆ. ಇಲ್ಲಿಯವರೆಗೆ ಕಾಡುಪ್ರಾಣಿಗಳ ಹಾವಳಿ ಸಾಮಾನ್ಯವಾಗಿದ್ದರೂ, ಆನೆಗಳ ಉಪಟಳ ಕಂಡುಬಂದಿರಲಿಲ್ಲ. ಆದರೆ, ಹಲವು ದಿನಗಳಿಂದ ಒಂಟಿ ಸಲಗವೊಂದು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೇ, ಶುಕ್ರವಾರ ಮುಂಜಾನೆ ಈ ಘಟನೆ ವರದಿಯಾಗಿದೆ.

ಗ್ರಾಮದ ಕೃಷಿಕರಾದ ನಾಗಯ್ಯ ನಾಯ್ಕ್ ಅವರ ತೋಟದಲ್ಲಿ ಆನೆಯು ಕಂಗು, ಬಾಳೆ ಬೆಳೆಗಳನ್ನು ಮತ್ತು ತೋಟದ ತಡೆಗೋಡೆಯನ್ನು ಧ್ವಂಸಗೊಳಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಆತಂಕಗೊಂಡಿರುವ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆನೆಯ ಹಾವಳಿಯಿಂದ ರೈತರಿಗೆ ಆಗಿರುವ ನಷ್ಟದ ಬಗ್ಗೆ ಅಂದಾಜು ಹಾಕಲಾಗುತ್ತಿದೆ. ಗ್ರಾಮಸ್ಥರು ಆನೆ ಸೆರೆ ಹಿಡಿಯುವಂತೆ ಅಥವಾ ಕಾಡಿಗಟ್ಟುವಂತೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.