
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ, 1 ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳ ಕಾಲ ಮೊಟ್ಟೆ ವಿತರಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸದ್ಯ ಜಾರಿಯಲ್ಲಿರುವ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ, ಕೆಲವು ಶಾಲೆಗಳಲ್ಲಿ ಈ ನಿಯಮವನ್ನು ಸಮರ್ಪಕವಾಗಿ ಪಾಲಿಸದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವರದಿಯ ಪ್ರಕಾರ, ಕೆಲವು ಶಾಲೆಗಳು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (SDMC) ಸೂಚನೆಯಂತೆ ವಾರಕ್ಕೆ ಮೂರು ದಿನ ಮೊಟ್ಟೆ ಮತ್ತು ಉಳಿದ ಮೂರು ದಿನ ಬಾಳೆಹಣ್ಣುಗಳನ್ನು ವಿತರಿಸುತ್ತಿವೆ. ನಿರ್ದಿಷ್ಟವಾಗಿ, ಸೋಮವಾರ ಮತ್ತು ಶನಿವಾರದಂದು ಮೊಟ್ಟೆ ನೀಡದೆ ಬಾಳೆಹಣ್ಣು ನೀಡುತ್ತಿರುವುದು ಕಂಡುಬಂದಿದೆ.
ಶಿಕ್ಷಣ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. 762 ಶಾಲೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ, ಸುಮಾರು 568 ಶಾಲೆಗಳಲ್ಲಿ ಮೊಟ್ಟೆ ವಿತರಣೆಯನ್ನು ಕಡ್ಡಾಯವಾಗಿ ಮಾಡದಿರುವ ಬಗ್ಗೆ ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ, ಪಿಎಂ ಪೋಷಣ್ ಶಕ್ತಿ ನಿರ್ಮಾಣದ ನಿರ್ದೇಶಕರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಎಲ್ಲಾ ಜಿಲ್ಲಾ ಉಪನಿರ್ದೇಶಕರು (DDPIs) ಈ 568 ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, SDMC ಸದಸ್ಯರಿಗೆ ಮೊಟ್ಟೆ ವಿತರಣೆಯ ಕಡ್ಡಾಯ ನಿಯಮದ ಬಗ್ಗೆ ತಿಳುವಳಿಕೆ ನೀಡುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಪೌಷ್ಟಿಕತೆಗಾಗಿ ಸರ್ಕಾರ ಹಮ್ಮಿಕೊಂಡಿರುವ ಈ ಯೋಜನೆಯು ಯಾವುದೇ ಲೋಪವಿಲ್ಲದೆ ಅನುಷ್ಠಾನಗೊಳ್ಳಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.