
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ಮೇಲೆ ಮೊಟ್ಟೆ ಎಸೆದಿರುವ ಘಟನೆ ನಡೆದಿದೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನ ಹೊರಗೆ ವರದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ
ತೋಷಖಾನಾ ಪ್ರಕರಣದ ವಿಚಾರಣೆಯ ನಂತರ, ಜೈಲಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಅಲೀಮಾ ಖಾನ್ ಮೇಲೆ ಏಕಾಏಕಿ ಮೊಟ್ಟೆ ಎಸೆಯಲಾಯಿತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದರೂ ಅಲೀಮಾ ಅವರು ಸಮಾಧಾನದಿಂದ ಪ್ರತಿಕ್ರಿಯಿಸಿ, “ಪರವಾಗಿಲ್ಲ ಬಿಡಿ” ಎಂದಿದ್ದಾರೆ.
ರಾವಲ್ಪಿಂಡಿ ಪೊಲೀಸರ ಹೇಳಿಕೆಯ ಪ್ರಕಾರ, ಬಂಧಿತ ಇಬ್ಬರು ಮಹಿಳೆಯರು ಪಿಟಿಐ ಪಕ್ಷದ ಬೆಂಬಲಿಗರೇ ಆಗಿದ್ದಾರೆ. ವರದಿಗಾರರ ಪ್ರಶ್ನೆಗಳಿಗೆ ಅಲೀಮಾ ಅವರು ಸರಿಯಾಗಿ ಉತ್ತರ ನೀಡದ ಕಾರಣ ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.