
ನವದೆಹಲಿ: ಬುಧವಾರ ಬೆಳಗಿನ ಜಾವ ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಶ್ರೇಣಿಯಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದ ಪರಿಣಾಮ, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
ಎನ್‌ಸಿಎಸ್ ಪ್ರಕಾರ, ಭೂಕಂಪವು ಭೂಮಿಯಿಂದ ಸುಮಾರು 75 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಕೇಂದ್ರಬಿಂದುವಿನ ಸುತ್ತಮುತ್ತ ಭೂಕಂಪ ಪ್ರಬಲವಾಗಿ ಅನುಭವವಾಗಿದೆ. ಘಟನೆಯು ಬೆಳಗಿನ ಜಾವ ನಡೆದ ಕಾರಣ ಹೆಚ್ಚಿನ ಜನರು ನಿದ್ರೆಯಲ್ಲಿ ಇದ್ದರೂ, ಹಲವರು ಕಂಪನದ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಕ್ಷಣವೇ ಹಂಚಿಕೊಂಡಿದ್ದಾರೆ.
ಸದ್ಯಕ್ಕೆ ಯಾವುದೇ ಸಾವು ನೋವು ಅಥವಾ ಆಸ್ತಿಪಾಸ್ತಿಯ ಹಾನಿಯ ವರದಿಗಳಿಲ್ಲದಿದ್ದರೂ, ಭೂಕಂಪದ ತೀವ್ರತೆ ಪರಿಗಣಿಸಿದರೆ ಅದು ಗಂಭೀರವಾಗಿದೆ ಎಂದು ಎನ್‌ಸಿಎಸ್ ಹೇಳಿದೆ.