
ಮೈಸೂರು : ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಸಿ.ಎಂ ಡಿ.ಕೆ. ಶಿವಕುಮಾರ್, ʻದಸರಾ ಧಾರ್ಮಿಕ ಆಚರಣೆಯಲ್ಲ, ಸಾಂಸ್ಕೃತಿಕ ಆಚರಣೆʼ ಎಂದು ತಿರುಗೇಟು ನೀಡಿದ್ದಾರೆ.
ಬಾನು ಮುಷ್ತಾಕ್ ಚಾಮುಂಡಿಬೆಟ್ಟ ಹತ್ತುವಂತಿಲ್ಲ ಎಂಬ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಚಾಮುಂಡಿಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ. ಎಲ್ಲ ಸಮುದಾಯದವರೂ ಅಲ್ಲಿಗೆ ಹೋಗುತ್ತಾರೆ’ ಎಂದು ಹೇಳಿದರು.
‘ಹಿಂದೂಗಳು ಮಸೀದಿ, ಚರ್ಚ್, ಗುರುದ್ವಾರಗಳಿಗೆ ಹೋಗುತ್ತಾರೆ. ರಾಮಮಂದಿರಕ್ಕೆ ಹಿಂದೂಗಳಷ್ಟೇ ಬರಬೇಕು ಎಂದು ಯಾಕೆ ಬೋರ್ಡ್ ಹಾಕಿಲ್ಲ?’ ಎಂದು ಪ್ರಶ್ನಿಸುವ ಮೂಲಕ ಡಿಕೆಶಿ ವಾಗ್ದಾಳಿ ನಡೆಸಿದರು. ಇದು ವೈಯಕ್ತಿಕ ವಿಚಾರವಲ್ಲ, ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದು ಅವರು ಹೇಳಿದರು.