
ಹೊಸದಿಲ್ಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಗುರುವಾರದ ಬಳಿಕ ಶುಕ್ರವಾರ ರಾತ್ರಿ ಕೂಡ ಪಾಕಿಸ್ತಾನದಿಂದ ಡ್ರೋನ್ ದಾಳಿಗಳು ನಡೆದಿವೆ. ಜಮ್ಮು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಹಾಗೂ ಗುಜರಾತ್ ಗಡಿ ಪ್ರದೇಶಗಳ 26ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ಗಳನ್ನು ಹಾರಿಸಿದೆ.
ಜಮ್ಮು ಕಾಶ್ಮೀರದ ಜಮ್ಮು, ಸಾಂಬಾ, ರಾಜೇರಿ, ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ ಮತ್ತು ರಾಜಸ್ಥಾನದ ಜೈಸಲ್‌ಮೇರ್, ಬಾರ್ಮರ್, ಪೋಖ್ರಾನ್
ಕಡೆಗೆ ಡ್ರೋನ್ ಗಳನ್ನು ಉಡಿಸಲಾಗಿದೆ. ವಿಶೇಷವಾಗಿ, ಎಲ್‌ಒಸಿ ಬಳಿ ಉತ್ತರ ಕಾಶ್ಮೀರದ ಕುಸ್ವಾರಾ, ಸಾಂಬಾ, ಪೂಂಚ್, ಉರಿ ಹಾಗೂ ನೌಗಮ್ ಪ್ರದೇಶಗಳಲ್ಲಿ ಗುಂಡಿನ ದಾಳಿಯೂ ನಡೆದಿದೆ.
ಭಾರತೀಯ ಸೇನೆ ಜೈಸರ್‌ನಲ್ಲಿ ಒಂಬತ್ತು ಮತ್ತು ಬಾರ್ಮರ್‌ನಲ್ಲಿ ಒಂದು ಡ್ರೋನ್ ಅನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ಬೆಳಗ್ಗಿನಿಂದ ಯಾವುದೇ ಡ್ರೋನ್ ದಾಳಿ ನಡೆದಿಲ್ಲವಾದರೂ ಪಾಕಿಸ್ತಾನ ಗುಂಡಿನ ದಾಳಿ ಮುಂದುವರೆಸಿದ್ದು, ಭಾರತ ಕೂಡ ತಕ್ಷಣ ಪ್ರತಿದಾಳಿ ನೀಡಿದೆ.
ರಾತ್ರಿ ಡ್ರೋನ್ ದಾಳಿ ವೇಳೆ ಜಮ್ಮು ಕಾಶ್ಮೀರದ ಆವಂತಿಪೋರಾದ ಏರ್‌ಬೇಸ್ ಗುರಿಯಾಗಿದ್ದು, ಅಲ್ಲಿಯ ಡ್ರೋನ್ ಅನ್ನು ಭಾರತ ವಾಯುಸೇನೆ ಆಕಾಶದಲ್ಲೇ ನಾಶಪಡಿಸಿದೆ. ಪಾಕಿಸ್ತಾನದ ಡ್ರೋನ್ ಗಳ ಶಬ್ದ ಗಡಿ ಪ್ರದೇಶಗಳಲ್ಲಿ ಭಯಚಕಿತ ಪರಿಸ್ಥಿತಿಯನ್ನುಂಟುಮಾಡಿದೆ.
ಇನ್ನು ಪಂಜಾಬ್‌ನ ಫಿರೋಜ್‌ಪುರದಲ್ಲಿ ಡ್ರೋನ್ ಒಂದು ಮನೆಯ ಮೇಲೆ ಬಿದ್ದು ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಈ ದಾಳಿಯಿಂದ ಪಾಕಿಸ್ತಾನ ಮತ್ತೊಮ್ಮೆ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದು, ಭಾರತೀಯ ಸೇನೆ ತಕ್ಷಣ ಪ್ರತಿರೋಧದ ಕಾರ್ಯಾಚರಣೆಯಲ್ಲಿ ತೊಡಗಿದೆ.