
ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 54 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿ ಕರ್ನಾಟಕ ಮೂಲದ ನಾಯಕನೊಬ್ಬರು ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರೀ ಬಹುಮತದೊಂದಿಗೆ 2027-29 ಅವಧಿಗೆ ಡಾ. ನಿಕಿನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಐತಿಹಾಸಿಕ ಜಯದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ KGMOA ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ ಕುಂದಾಪುರದ ಅಧ್ಯಕ್ಷ ಡಾ. ನಾಗೇಶ್ ಅವರು ಡಾ. ನಿಕಿನ್ ಶೆಟ್ಟಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ. “ಕೇವಲ 20 ದಿನಗಳೊಳಗೆ 27 ಜಿಲ್ಲೆಗಳ ಪ್ರವಾಸ ಮಾಡಿ, ಸದಸ್ಯರ ನಂಬಿಕೆ ಗೆಲ್ಲುವಲ್ಲಿ ಅವರು ತೋರ್ಪಟ್ಟ ಶ್ರಮ ಶ್ಲಾಘನೀಯ. ಈ ಗೆಲುವು ಉಡುಪಿ ಜಿಲ್ಲಾ ಸಂಘದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭ ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಮಹೇಂದ್ರ ಕುಮಾರ್ ಶೆಟ್ಟಿಯವರು ಸಹ ಡಾ. ನಿಕಿನ್ ಶೆಟ್ಟಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.