
ಮಂಗಳೂರು : ಡಾ. ಎಂ.ಎನ್.ಆರ್. ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ಅವರು ನಿರ್ಮಿಸುತ್ತಿರುವ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶಿಸುತ್ತಿರುವ ಹಾಸ್ಯಮಯ ತುಳು ಚಲನಚಿತ್ರ ‘ಡಾಕ್ಟ್ರಾ ಭಟ್ರಾ?’ದ ಮುಹೂರ್ತ ಸಮಾರಂಭವು ಆದಿತ್ಯವಾರ ಆಗಸ್ಟ್ 24ರಂದು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ಕುರಿತು
ಇದು ಸಂಪೂರ್ಣ ಮನರಂಜನಾತ್ಮಕ ಹಾಸ್ಯ ಸಿನಿಮಾವಾಗಿದ್ದು, ವಿಜ್ಞಾನ ಮತ್ತು ಆಚಾರ-ವಿಚಾರಗಳ ನಡುವಿನ ಸಂಘರ್ಷವನ್ನು ವಿಭಿನ್ನ ಕಥಾಹಂದರದಲ್ಲಿ ಹೆಣೆಯಲಾಗಿದೆ. ಚಿತ್ರದಲ್ಲಿ ಜನಪ್ರಿಯ ತುಳು ಕಲಾವಿದರು ನಟಿಸಿದ್ದು, ನವೀನ್ ಡಿ. ಪಡೀಲ್ ಅವರು ‘ಭಟ್ರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಮಂಗಳೂರು ಹೊರವಲಯದ ನೀರ್ ಮಾರ್ಗದಲ್ಲಿ 30 ದಿನಗಳ ಕಾಲ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಿರ್ಮಾಪಕರ ಮಾತು
ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, “ನಮ್ಮ ಸಂಸ್ಥೆ ಈ ಹಿಂದೆ ಜೋಗುಳ
ಎಂಬ ಮೆಗಾ ಧಾರಾವಾಹಿ ಹಾಗೂ ಗಲಾಟೆ
ಎಂಬ ಚಲನಚಿತ್ರ ನಿರ್ಮಿಸಿತ್ತು. ಈಗ ತುಳು ಭಾಷೆ ಮತ್ತು ಚಿತ್ರರಂಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಹಾಸ್ಯಮಯ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ಮಿಸುತ್ತಿದ್ದೇನೆ” ಎಂದರು.
ಉಪಸ್ಥಿತರು
ಮುಹೂರ್ತ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಎ.ಜೆ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಡಾ. ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್, ಆರ್.ಧನರಾಜ್, ಶಶಿರಾಜ್ ಕಾವೂರು, ಕೆ.ಕೆ.ಪೇಜಾವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.