
ಮಂಗಳೂರು: “ಮಾದಕ ದ್ರವ್ಯ ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ಪ್ರಮುಖವಾಗಿ ತಮ್ಮ ಜಾಲಕ್ಕೆ ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ನೀವು ಅದಕ್ಕೆ ಬಲಿಯಾಗದೆ, ನಿಮ್ಮ ಭವಿಷ್ಯ ನಿರ್ಮಾಣದ ಕಡೆಗೆ ಪ್ರಯತ್ನಶೀಲರಾಗಬೇಕು” ಎಂದು ಬಂದರು ಉತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಹೇಳಿದರು.
ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾದಕ ದ್ರವ್ಯ ವ್ಯಸನ ಮತ್ತು ಸೈಬರ್ ಅಪರಾಧಗಳ ಕುರಿತು ಮಾತನಾಡಿದರು.
ಡ್ರಗ್ಸ್ ಹಾಗೂ ಸೈಬರ್ ಅಪರಾಧಗಳ ಬಗ್ಗೆ ವಿವರವಾದ ಮಾಹಿತಿ
ಮಾದಕ ದ್ರವ್ಯ ತಡೆ ಸಮಿತಿಯ ಕಾರ್ಯನಿರ್ವಹಣೆ, ಕ್ಯೂಆರ್ ಕೋಡ್ ಮೂಲಕ ಪೊಲೀಸರಿಗೆ ಅನಾಮಿಕವಾಗಿ ದೂರು ಸಲ್ಲಿಸುವ ಸೌಲಭ್ಯ, ಮತ್ತು ಮಾದಕ ದ್ರವ್ಯ ಪ್ರಕರಣಗಳಲ್ಲಿ ಸಿಲುಕಿಕೊಂಡರೆ ಎದುರಾಗುವ ಸಮಸ್ಯೆಗಳ ಬಗ್ಗೆ ಅಜ್ಮತ್ ಅಲಿ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಇದಲ್ಲದೆ, ಸೈಬರ್ ಅಪರಾಧಗಳ ಕುರಿತು ಸಹ ಅವರು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ಕಾಲೇಜಿನಿಂದ ಮಾದಕದ್ರವ್ಯ ಮುಕ್ತ ಆವರಣಕ್ಕೆ ಕ್ರಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿದ್ದರು. ಕಾಲೇಜಿನ ಆವರಣವನ್ನು ಮಾದಕದ್ರವ್ಯ ಮುಕ್ತಗೊಳಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರು ವಿವರಿಸಿದರು. ಇದರ ಅಂಗವಾಗಿ, ಎಲ್ಲಾ ವಿದ್ಯಾರ್ಥಿಗಳು ಹಾಗೂ ಹೆತ್ತವರು ಸಹಿ ಮಾಡಿ ಸಲ್ಲಿಸಬೇಕಾದ ವಿಶೇಷ ಮುಚ್ಚಳಿಕೆ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮಾದಕದ್ರವ್ಯ ತಡೆ ಸಮಿತಿಯ ಸಂಯೋಜಕರಾದ ಡಾ. ಲೋಕೇಶ್‌ನಾಥ್ ಬಿ., ಸಮಿತಿಯ ಇತರ ಸದಸ್ಯರು, ಬೋಧಕ ವರ್ಗದವರು ಉಪಸ್ಥಿತರಿದ್ದರು. ಐಕ್ಯೂಎಸಿ (IQAC) ಸಂಯೋಜಕ ದೇವಿಪ್ರಸಾದ್ ಸ್ವಾಗತಿಸಿದರು, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ವಂದಿಸಿದರು. 2025-26ನೇ ಸಾಲಿನಲ್ಲಿ ಪ್ರಥಮ ಪದವಿಗೆ ಪ್ರವೇಶ ಪಡೆದಿರುವ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.