
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕವು ಆಮದು ಮಾಡಿಕೊಳ್ಳುವ ಔಷಧಗಳ ಮೇಲೆ ಶೇ. 100ರಷ್ಟು ಆಮದು ಸುಂಕವನ್ನು ವಿಧಿಸಿದ್ದಾರೆ. ಈ ಪರಿಷ್ಕೃತ ತೆರಿಗೆ ದರವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಔಷಧಗಳ ಜೊತೆಗೆ, ಕಿಚನ್ ಕ್ಯಾಬಿನೆಟ್ ಮತ್ತು ಸ್ನಾನಗೃಹದ ಉಪಕರಣಗಳ ಮೇಲೆ ಶೇ. 50, ಮೆತ್ತನೆಯ ಹಾಸಿಗೆ, ಸೋಫಾಸೆಟ್ ಮತ್ತು ಪೀಠೋಪಕರಣಗಳ ಮೇಲೆ ಶೇ. 30 ಮತ್ತು ಭಾರಿ ಟ್ರಕ್‌ಗಳ ಮೇಲೆ ಶೇ. 25ರಷ್ಟು ಸುಂಕ ಹೇರಲಾಗಿದೆ.
ದೇಶೀಯ ಉತ್ಪಾದನೆಗೆ ಟ್ರಂಪ್‌ನ ಒತ್ತು
ಈ ಆಮದು ತೆರಿಗೆ ಹೆಚ್ಚಳವು ಸರ್ಕಾರದ ಬಜೆಟ್ ಹೊರೆಯನ್ನು ತಗ್ಗಿಸಲಿದೆ ಮತ್ತು ದೇಶೀಯ ತಯಾರಿಕೆಯನ್ನು ಉತ್ತೇಜಿಸಲಿದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘ಟೂಥ್’ನಲ್ಲಿ ಹೇಳಿದ್ದಾರೆ. ಸುಂಕ ಏರಿಕೆಗೆ ಅವರು ಯಾವುದೇ ನಿರ್ದಿಷ್ಟ ಕಾನೂನು ಸಮರ್ಥನೆಯನ್ನು ನೀಡಿಲ್ಲವಾದರೂ, ರಾಷ್ಟ್ರೀಯ ಭದ್ರತೆ ಸೇರಿದಂತೆ ಇತರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಈ ಹಿಂದೆ, 1962ರ ವ್ಯಾಪಾರ ವಿಸ್ತರಣಾ ಕಾಯ್ದೆಯಡಿ ಅಮೆರಿಕವು ಔಷಧ, ಭಾರಿ ಟ್ರಕ್ ಮತ್ತು ಮರದ ದಿಮ್ಮಿಗಳು ಸೇರಿದಂತೆ ವಿವಿಧ ವಸ್ತುಗಳ ಆಮದಿನಿಂದ ರಾಷ್ಟ್ರೀಯ ಭದ್ರತೆ ಮೇಲೆ ಆಗುವ ಪರಿಣಾಮಗಳ ಕುರಿತು ತನಿಖೆ ನಡೆಸಿತ್ತು.
ಸರಕಾರದ ಸ್ಪಷ್ಟನೆಗಾಗಿ ನಿರೀಕ್ಷೆ
ಶೇ. 100ರಷ್ಟು ತೆರಿಗೆಯು ಅಮೆರಿಕದಲ್ಲಿ ಹೊಸದಾಗಿ ನಿರ್ಮಾಣವಾಗುವ ಮತ್ತು ನಿರ್ಮಾಣ ಹಂತದಲ್ಲಿರುವ ಔಷಧ ತಯಾರಿಕಾ ಘಟಕಗಳಿಗೆ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಆದರೆ, ಈಗಾಗಲೇ ಅಮೆರಿಕದಲ್ಲಿ ಔಷಧ ತಯಾರಿಸುತ್ತಿರುವ ಘಟಕಗಳ ಮೇಲೆ ಈ ತೆರಿಗೆ ಅನ್ವಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.
ಈ ಸುಂಕ ಬೆದರಿಕೆ ಬೆನ್ನಲ್ಲೇ, ಜಾನ್ಸನ್ ಆ್ಯಂಡ್ ಜಾನ್ಸನ್, ಅಸ್ಟ್ರಾ ಜೆನೆಕಾ, ರೋಚ್, ಬ್ರಿಸ್ಟಿಲ್ ಮತ್ತು ಎಲಿ ಲಿಲ್ಲಿ ಸೇರಿದಂತೆ ಹಲವು ಔಷಧ ತಯಾರಿಕಾ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿವೆ.