
ಅಮೆರಿಕ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಭಾರತ ಮತ್ತು ರಷ್ಯಾವನ್ನು “ಸತ್ತ ಆರ್ಥಿಕತೆಗಳು” ಎಂದು ಜರೆದಿದ್ದಾರೆ. ಅಲ್ಲದೆ, ರಷ್ಯಾ ಜೊತೆ ಭಾರತದ ವ್ಯಾಪಾರ ಸಂಬಂಧವನ್ನು ಪ್ರಶ್ನಿಸಿ, ಈ ಎರಡೂ ದೇಶಗಳ ನೆಲಕಚ್ಚಿದ ಆರ್ಥಿಕತೆ (ಡೆಡ್ ಎಕಾನಮಿ) ಗಳು ಒಟ್ಟಿಗೆ ಸೇರಿ ನಾಶವಾಗಲಿ ಎಂದು ಅವರುಶಾಪ ಹಾಕಿದ್ದಾರೆ. ಈ ಟೀಕೆಗಳ ಹಿಂದೆ ಭಾರತದ ಮೇಲೆ 25% ಸುಂಕ ವಿಧಿಸುವ ಟ್ರಂಪ್ ಅವರ ನಿರ್ಧಾರವೂ ಸೇರಿಕೊಂಡಿದೆ.
ಟ್ರಂಪ್ ಅವರ ಹೇಳಿಕೆಯ ವಿವರಗಳು:
ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ನನಗೆ ಭಾರತ ಮತ್ತು ರಷ್ಯಾ ಏನು ಮಾಡುತ್ತವೆ ಎಂಬುದು ಮುಖ್ಯವಲ್ಲ. ಅವರು ತಮ್ಮ ಸತ್ತ ಆರ್ಥಿಕತೆಗಳನ್ನು ಒಟ್ಟಿಗೆ ಕೆಳಕ್ಕೆ ತಳ್ಳಬಹುದು” ಎಂದು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಕಡಿಮೆಯಿದೆ. ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಟ್ರಂಪ್ ಸಿಟ್ಟಿಗೆ ಕಾರಣಗಳು:
- ಭಾರತದೊಂದಿಗೆ ಅಮೆರಿಕದ ವ್ಯಾಪಾರ ಒಪ್ಪಂದಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇರದಿರುವುದು.
- ಅಮೆರಿಕದ ಒತ್ತಡಕ್ಕೆ ಮಣಿಯದೆ ಭಾರತವು ರಷ್ಯಾದಿಂದ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತಿರುವುದು.
- ಅಮೆರಿಕ ಮತ್ತು ಭಾರತದ ನಡುವೆ ಹಲವು ವಿಷಯಗಳಲ್ಲಿ ಒಮ್ಮತ ಮೂಡದಿರುವುದು.