
ಶರ್ಮ್ ಎಲ್-ಶೇಖ್ (ಈಜಿಪ್ಟ್): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ (ಅ. 13) ಈಜಿಪ್ಟ್‌ನಲ್ಲಿ ನಡೆದ ವಿಶ್ವ ನಾಯಕರ ಶೃಂಗಸಭೆಯಲ್ಲಿ, ಭಾರತವನ್ನು “ಶ್ರೇಷ್ಠ ದೇಶ” ಎಂದು ಹೊಗಳಿದ್ದು, ಅಲ್ಲಿನ ಉನ್ನತ ನಾಯಕನನ್ನು (ಪ್ರಧಾನಿ ನರೇಂದ್ರ ಮೋದಿ) “ನನ್ನ ಉತ್ತಮ ಸ್ನೇಹಿತ” ಎಂದು ಹೆಸರು ಉಲ್ಲೇಖಿಸದೇ ಶ್ಲಾಘಿಸಿದ್ದಾರೆ.
ಇಸ್ರೇಲ್-ಹಮಾಸ್ ನಡುವಿನ ಗಾಜಾ ಕದನಕ್ಕೆ ವಿರಾಮ ಹಾಕಿದ ನಂತರ ಆಯೋಜಿಸಲಾದ ಈ ಶೃಂಗಸಭೆಯಲ್ಲಿ ಟ್ರಂಪ್ ಮಾತನಾಡುತ್ತಿದ್ದರು.
ಪಾಕ್ ಪ್ರಧಾನಿ ಎದುರೇ ಭಾರತದ ಗುಣಗಾನ
ಟ್ರಂಪ್, “ಭಾರತ ಒಂದು ಶ್ರೇಷ್ಠ ದೇಶ. ನನ್ನ ಆತ್ಮೀಯ ಸ್ನೇಹಿತ ಅಲ್ಲಿ ಉನ್ನತ ಸ್ಥಾನದಲ್ಲಿದ್ದು, ಅವರು ಅದ್ಭುತ ಕೆಲಸ ಮಾಡಿದ್ದಾರೆ,” ಎಂದು ಹೇಳಿದ್ದಾರೆ.
ಇದೇ ವೇಳೆ, ಟ್ರಂಪ್ ಅವರು ತಮ್ಮ ಹಿಂಭಾಗದಲ್ಲಿ ನಿಂತಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ನೋಡಿದಾಗ, “ಭಾರತ ಮತ್ತು ಪಾಕಿಸ್ತಾನ ಉತ್ತಮ ಸಂಬಂಧದ ಮೂಲಕ ಒಟ್ಟಿಗೆ ಸಾಗುತ್ತದೆ ಎಂದು ಭಾವಿಸುವೆ,” ಎಂದು ಹೇಳಿದ್ದಾರೆ. ಇದಕ್ಕೆ ಶೆಹಬಾಜ್ ಶರೀಫ್ ಕಿರುನಗೆ ಬೀರಿ ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ವಿವರಿಸಿದೆ.
ಇದಕ್ಕೂ ಮೊದಲು ಟ್ರಂಪ್ ಅವರು ಶೆಹಬಾಜ್ ಶರೀಫ್ ಅವರನ್ನು ಹೊಗಳಿದ್ದರು. ಅಲ್ಲದೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರನ್ನು ಕೂಡ “ನನ್ನ ನೆಚ್ಚಿನ ಫೀಲ್ಡ್” ಎಂದು ಶ್ಲಾಘಿಸಿ, ಬಳಿಕ ಶರೀಫ್ ಅವರನ್ನು ಸಭೆಯನ್ನುದ್ದೇಶಿಸಿ ಮಾತನಾಡುವಂತೆ ಆಹ್ವಾನಿಸಿದ್ದರು.