
ಕಾರ್ಕಳ : ಕಾರ್ಕಳ ತಾಲೂಕು ಬೈಲೂರು -ಕೌಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಗನಪಲ್ಕೆ – ನಕ್ರೆ – ಕಾರ್ಕಳ ಪಿ ಡಬ್ಲ್ಯೂಡಿ ರಸ್ತೆಯ ಅಬ್ಬೆಟ್ಟು ಎಂಬ ಸಾರ್ವಜನಿಕ ಪರಿಸರದಲ್ಲಿ ಹಲವು ಸಮಯದಿಂದ ದುರ್ನಾಥ ಬೀರುವ ಹಸಿ /ಒಣ ತ್ಯಾಜ್ಯ ಕೋಳಿ, ಹಂದಿಯ ತ್ಯಾಜ್ಯ,ಡೈಪರ್ ಬಿಯರ್ ಬಾಟಲಿ,ಇತ್ಯಾದಿಯನ್ನು ಎಸೆಯುತ್ತಿದ್ದು ಗಮನಕ್ಕೆ ಬಂದಿದ್ದು ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ಹಲವು ಬಾರಿ ಗ್ರಾಮ ಪಂಚಾಯತ್ ನಿಂದ ಪರಿಸರವನ್ನು ಸ್ವಚ್ಛಗೊಳಿಸಲಾಗಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ವಾರ್ಡ್ ಸದಸ್ಯರಾದ ವಿಶ್ವೇಶ್ ರವರ ವಿಶೇಷ ಮುತುವರ್ಜಿಯಿಂದ ಸದರಿ ಪ್ರದೇಶದಲ್ಲಿ ಕಸ ಎಸೆಯುವವರ ಮೇಲೆ ಕಣ್ಗಾವಲು ಇಡುವ ಸಲುವಾಗಿ 360 ಡಿಗ್ರಿ ಚಲಿಸುವ ಸೋಲಾರ್ ಸಿ ಸಿ ಕ್ಯಾಮೆರಾ ಅಳವಡಿಸಲಾಗಿತ್ತು.ನಂತರವೂ ಇದರ ಹಾವಳಿ ಜಾಸ್ತಿ ಯಾಗುತ್ತಿದ್ದು ತ್ಯಾಜ್ಯ ಎಸೆಯುತಿದ್ದವರನ್ನು ಸಿಸಿ ಕ್ಯಾಮೆರಾದ ಸಹಾಯದಿಂದ ಪತ್ತೆಹಚ್ಚಿ ತ್ಯಾಜ್ಯ ಎಸೆದವರನ್ನು ಸದರಿ ಸ್ಥಳಕ್ಕೆ ಬರಮಾಡಿಕೊಂಡು ಸದರಿ ಪರಿಸರವನ್ನು ತ್ಯಾಜ್ಯ ಎಸೆದವರ ಸ್ವಂತ ಖರ್ಚಿನಲ್ಲಿ ಸ್ವಚ್ಛಗೊಳಿಸಲು ತಿಳಿಸಲಾಗಿದೆ.
ಆ ಗ್ರಾಮದ ಪಂಚಾಯತ್ ಸದಸ್ಯರಾದ ವಿಶ್ವೇಶ್ ಕೌಡೂರುರವರು ತಮ್ಮ ವಾರ್ಡ್ ನ ಪ್ರತಿಯೊಂದು ಸಮಸ್ಯೆಗಳನ್ನು ಅರಿತು ಸೂಕ್ತ ಕ್ರಮಗಳನ್ನು ಕೈಗೊಂಡು ಉತ್ತಮ ಕಾರ್ಯ ವೈಖರಿಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗೂ ಈ ಸಮಸ್ಯೆಯನ್ನು ಬಗೆ ಹರಿಸಿ ತಮ್ಮ ವಾರ್ಡ್ ಶುಚಿಯಾಗಿಡುವುದರ ಜೊತೆಗೆ ಅಕ್ಕ ಪಕ್ಕ ವಾಸಿಸುವ ಜನರಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಮುಂದಿನ ದಿನದಲ್ಲಿ ಈ ರೀತಿ ಘಟನೆ ಕಂಡುಬಂದಲ್ಲಿ ತ್ಯಾಜ್ಯ ಎಸೆದ ಪ್ರದೇಶ ಸ್ವಚ್ಛಗೊಳುಸುವುದರ ಜೊತೆಗೆ ಪಂಚಾಯತ್ ನ ವತಿಯಿಂದ 5000 ದಂಡ ವಿಧಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಲಾಗಿದೆ.ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.