
ಪುತ್ತೂರು: ಪುತ್ತೂರಿನ ಬಿಜೆಪಿ ಮುಖಂಡರ ಪುತ್ರ ಶ್ರೀಕೃಷ್ಣ ಜೆ. ರಾವ್ ವಿರುದ್ಧ ಕೇಳಿಬಂದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಸಂತ್ರಸ್ತೆ ಹೆರಿಗೆಯಾದ ಬಳಿಕ ನಡೆಸಿದ ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಶ್ರೀಕೃಷ್ಣ ಜೆ. ರಾವ್ ಎಂದು ದೃಢಪಟ್ಟಿದೆ ಎಂದು ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ. ನಂಜುಡಿ ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಯುವತಿ ಗರ್ಭಿಣಿಯಾದ ನಂತರ ಕೃಷ್ಣ ರಾವ್ ಮದುವೆಗೆ ನಿರಾಕರಿಸಿ ನಾಪತ್ತೆಯಾಗಿದ್ದ ಎಂದು ವರದಿಯಾಗಿತ್ತು. ಬಳಿಕ ಪೊಲೀಸರು ಜುಲೈ 4ರಂದು ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿದ್ದರು. ‘ಲವ್, ಸೆಕ್ಸ್, ದೋಖಾ’ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಕೃಷ್ಣ ರಾವ್ ನ್ಯಾಯಾಂಗ ಬಂಧನಕ್ಕೊಳಪಟ್ಟು ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಸೆಪ್ಟೆಂಬರ್ 27ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ. ನಂಜುಡಿ, ಡಿಎನ್‌ಎ ವರದಿ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಸಂತ್ರಸ್ತೆಯ ತಾಯಿ ಮತ್ತು ತಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಸಂತ್ರಸ್ತೆ ಮತ್ತು ಆಕೆಯ ತಾಯಿ ನಮಿತಾ ರವರು ಉಪಸ್ಥಿತರಿದ್ದರು.



































