
ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕುಲಶೇಖರ, ಮಂಗಳೂರು ಇದರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತವು 2024-25ನೇ ಸಾಲಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಂಘ ಪ್ರಶಸ್ತಿಯನ್ನು ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿ ಗೌರವಿಸಿದೆ. ಈ ಪ್ರಶಸ್ತಿಯು ತಾಲೂಕು ಮಟ್ಟದಲ್ಲಿ ಹಾಲು ಉತ್ಪಾದನೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಸಂಘಕ್ಕೆ ನೀಡುವ ಅತ್ಯುನ್ನತ ಗೌರವವಾಗಿದೆ.
ಜುಲೈ 30ರಂದು ಕಾರ್ಕಳದಲ್ಲಿ ನಡೆದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ತಾಲೂಕು ಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘವು ನಿರಂತರವಾಗಿ 2ನೇ ಬಾರಿಗೆ ಹಾಗೂ ಒಟ್ಟಾರೆಯಾಗಿ 3ನೇ ಬಾರಿಗೆ ಈ ಪ್ರಶಸ್ತಿಗೆ ಭಾಜನವಾಗಿದೆ. ಇದು ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿಯ ನಿರಂತರ ಪರಿಶ್ರಮಕ್ಕೆ ದೊರೆತ ಫಲವಾಗಿದೆ.
ಸಂಘವು ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡುವುದರ ಮೂಲಕ ಈ ಮನ್ನಣೆಯನ್ನು ಗಳಿಸಿದೆ. ಸಂಘದ ಸದಸ್ಯರು ಪ್ರತಿದಿನ ಗುಣಮಟ್ಟದ ಹಾಲನ್ನು ಪೂರೈಸಲು ವಹಿಸಿದ ಕಾಳಜಿ ಮತ್ತು ಸಂಘದ ಆಡಳಿತ ಮಂಡಳಿಯ ಸಮರ್ಪಿತ ನಿರ್ವಹಣೆಯು ಈ ಯಶಸ್ಸಿಗೆ ಕಾರಣವಾಗಿದೆ. ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿಯ ಸಹಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.