
ಬೆಂಗಳೂರು: ಸದಾ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಿಚಿತ್ರ ಸನ್ನಿವೇಶವೊಂದು ವೇದಿಕೆಯ ಮೇಲೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡಲು ವೇದಿಕೆಯ ಮುಂಭಾಗಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಡಿಸಿಎಂ ಅವರು ಗಂಭೀರವಾಗಿ ಭಾಷಣ ಮಾಡುತ್ತಿದ್ದ ವೇಳೆ, ಶಾಸಕ ಪ್ರದೀಪ್ ಈಶ್ವರ್ ಅವರು ಸತತವಾಗಿ ಅವರ ಬೆನ್ನ ಹಿಂದೆಯೇ ಬಂದು ನಿಂತಿದ್ದರು. ಡಿಕೆಶಿ ಮಾತನಾಡುತ್ತಿರುವಾಗ ಪದೇ ಪದೇ ಹತ್ತಿರಕ್ಕೆ ಬಂದು ನಿಲ್ಲುತ್ತಿದ್ದ ಪ್ರದೀಪ್ ಈಶ್ವರ್ ಅವರ ವರ್ತನೆಯಿಂದ ಅಸಮಾಧಾನಗೊಂಡ ಡಿ.ಕೆ. ಶಿವಕುಮಾರ್, ಭಾಷಣದ ನಡುವೆಯೇ ಹಿಂದಕ್ಕೆ ತಿರುಗಿ ಶಾಸಕರ ಬೆನ್ನು ತಟ್ಟಿ, “ಹೋಗಿ ಕುಳಿತುಕೊಳ್ಳಿ” ಎಂದು ಪ್ರದೀಪ್ ಈಶ್ವರ್ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.
ಡಿಸಿಎಂ ಅವರ ಈ ದಿಢೀರ್ ಪ್ರತಿಕ್ರಿಯೆಯಿಂದ ಕೊಂಚ ಮುಜುಗರಕ್ಕೊಳಗಾದ ಪ್ರದೀಪ್ ಈಶ್ವರ್, ತಕ್ಷಣವೇ ವೇದಿಕೆಯ ಮೇಲೆ ಇದ್ದ ಕುರ್ಚಿಯಲ್ಲಿ ಹೋಗಿ ಕುಳಿತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯ ಸಿಎಂ ಕುರ್ಚಿ ಪೈಪೋಟಿ ಮತ್ತು ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿವೆ. ಅದರಲ್ಲೂ ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಈಶ್ವರ್, ಸಚಿವ ಸಂಪುಟ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿರುವ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರ ಈ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿಸಿಎಂ ಅವರು ಶಾಸಕರ ನಡವಳಿಕೆಗೆ ಬಹಿರಂಗವಾಗಿಯೇ ಗರಂ ಆಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.



































