
ಉಡುಪಿ : ಅಸಂಖ್ಯಾತ ಭಕ್ತರ ಶೃದ್ದಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರ ನಡೆಯುತ್ತಿರುವ ಅಪಪ್ರಚಾರಗಳು ವ್ಯವಸ್ಥಿತ ಷಡ್ಯಂತ್ರ ಎಂಬ ಅಂಶ ಬಟ್ಟಾಬಯಲಾಗಿದೆ. ಶಬರಿಮಲೆ, ತಿರುಪತಿ, ಇಶಾ ಫೌಂಡೇಶನ್ ಬಳಿಕ ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿರುವ ಹಿಂದೂ ವಿರೋಧಿಗಳ ಸಂಚನ್ನು ವಿಫಲಗೊಳಿಸಿ ಹಿಂದೂಗಳ ಶೃದ್ಧಾ ಕೇಂದ್ರಗಳ ಮೇಲಿನ ದಾಳಿಯನ್ನು ಖಂಡಿಸಿ, ಉಡುಪಿ ಜಿಲ್ಲೆಯಾದ್ಯoತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ‘ಧರ್ಮಸ್ಥಳ ಉಳಿಸಿ’ ಅಭಿಯಾನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಮಂಡಲಗಳ ವ್ಯಾಪ್ತಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ , ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ತುರ್ತು ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸರಕಾರ ನಡೆಸುತ್ತಿದ್ದ ಎಸ್.ಐ.ಟಿ. ತನಿಖೆಯ ನೆಪವನ್ನು ಮುಂದಿಟ್ಟುಕೊಂಡು ನಿರಂತರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಕಪೋಲಕಲ್ಪಿತ ವಿಚಾರಗಳೊಂದಿಗೆ ಮಾನಹಾನಿಕರ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸುತ್ತಿರುವ ವ್ಯಕ್ತಿಗಳ ಷಡ್ಯಂತ್ರದ ಕುರಿತು ತನಿಖೆ ನಡೆಸುವುದು ಅತ್ಯಗತ್ಯವಾಗಿದೆ.
ವಿಶೇಷವಾಗಿ ಕರಾವಳಿ ಜಿಲ್ಲೆಗಳ ಭಕ್ತ ಸಮೂಹ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಾರ ಶ್ರದ್ಧಾಭಕ್ತಿ ನಂಬಿಕೆಯನ್ನು ಇರಿಸಿಕೊಂಡಿದ್ದು, ಇತ್ತೀಚಿನ ಕೆಲವು ಅನಪೇಕ್ಷಿತ ವಿದ್ಯಮಾನಗಳು ಭಕ್ತಾಭಿಮಾನಿಗಳ ಭಾವನೆಗೆ ಘಾಸಿಯನ್ನುoಟುಮಾಡಿವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ‘ಧರ್ಮಸ್ಥಳ ಉಳಿಸಿ’ ಅಭಿಯಾನದಡಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಶೃದ್ದಾ ಕೇಂದ್ರದ ರಕ್ಷಣೆಗೆ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಆ.21ರಂದು ಕುಂದಾಪುರದಲ್ಲಿ ಪ್ರತಿಭಟನೆ
‘ಧರ್ಮಸ್ಥಳ ಉಳಿಸಿ’ ಅಭಿಯಾನದಡಿ ಆ.21 ಗುರುವಾರ ಬೆಳಿಗ್ಗೆ ಗಂಟೆ 10.00ಕ್ಕೆ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ನಡೆಯುವ ಸಾಮೂಹಿಕ ಪ್ರತಿಭಟನೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರು ಬಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತರ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿಯೂ ಪ್ರತಿಭಟನಾ ಪರ್ವ ಮುಂದುವರಿಯಲಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಶ್ರೀಶ ನಾಯಕ್ ಪೆರಣಂಕಿಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಸಹಿತ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.