
ಬೆಂಗಳೂರು : ಕನ್ನಡ ಚಿತ್ರರಂಗದ ನಿರ್ದೇಶಕ ಪ್ರೇಮ್ ಅವರು ಎಮ್ಮೆ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿದ್ದಾರೆ. ತಮ್ಮ ತಾಯಿಯ ನೆನಪಿನಲ್ಲಿ ಎಮ್ಮೆ ಸಾಕುವ ಆಸೆ ಹೊಂದಿದ್ದ ಅವರಿಗೆ ಗುಜರಾತ್ ಮೂಲದ ವ್ಯಕ್ತಿಯೊಬ್ಬ ₹4.5 ಲಕ್ಷ ರೂಪಾಯಿ ಪಂಗನಾಮ ಹಾಕಿ ನಾಪತ್ತೆಯಾಗಿದ್ದಾನೆ.
ಏನಾಗಿತ್ತು?
ನಿರ್ದೇಶಕ ಪ್ರೇಮ್ ಅವರು ತಮ್ಮ ಅಮ್ಮನ ತೋಟ
ಎಂಬ ಫಾರ್ಮ್‌ಗೆ ಎರಡು ಎಮ್ಮೆಗಳನ್ನು ಖರೀದಿಸಲು ಯೋಚಿಸಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ವನರಾಜ್ ಭಾಯ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಎಮ್ಮೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ ವನರಾಜ್, ಆರಂಭದಲ್ಲಿ ₹25,000 ಮುಂಗಡ ಹಣ ಪಡೆದಿದ್ದ. ನಂತರ, ಎರಡು ಎಮ್ಮೆಗಳ ವೀಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿ, ಹಂತ ಹಂತವಾಗಿ ಒಟ್ಟು ₹4.5 ಲಕ್ಷ ಹಣವನ್ನು ವರ್ಗಾಯಿಸುವಂತೆ ಕೇಳಿಕೊಂಡಿದ್ದ.
ಹಣ ಪಡೆದ ನಂತರ ವನರಾಜ್, ಎಮ್ಮೆಗಳನ್ನು ನೀಡದೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ. ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ತಾವು ಮೋಸ ಹೋಗಿರುವುದನ್ನು ಅರಿತ ಪ್ರೇಮ್, ತಮ್ಮ ಮ್ಯಾನೇಜರ್ ದಶಾವರ ಚಂದ್ರು ಅವರ ಮೂಲಕ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ವನರಾಜ್ ಭಾಯ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.