
ಕಲಬುರ್ಗಿ : ಡಿಜಿಟಲ್ ಕ್ರಾಂತಿ ಕ್ಲಿನಿಕಲ್ ಸಂಶೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದೆ ಎಂದು ಎಸ್ ಸಿ ಆರ್ ಎಂ ಪಿ ಅಧ್ಯಕ್ಷ ಗುರುಪ್ರೀತ್ ಸಿಂಗ್ ಹೇಳಿದರು. ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪೂರೆ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸುಟಿಕಲ್ ಸೈನ್ಸ್ ಹಾಗೂ ಕ್ಲೀನಿಕಲ್ ರೀಸರ್ಚ್ ಆಂಡ್ ಮೇಡಿಕಲ್ ಪ್ರೋಪೆಶನಲ್ ಸೋಸೈಟಿ ಹೈದರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಕಾನ್ ಕ್ಲೇವ್ 2025 ಉದ್ಘಾಟಿಸಿ ಮಾತನಾಡುತ್ತಿದ್ದರು.

ಔಷಧ ಅಭಿವೃದ್ಧಿಯಲ್ಲಿ ಸಹ ಡಿಜಿಟಲ್ ಕ್ಷೇತ್ರವು ಕಾರ್ಯವನ್ನು ವೇಗಗೊಳಿಸಿದೆ. ರೋಗಿಗಳ ಆರೋಗ್ಯವನ್ನು ಸುಧಾರಿಸುವ ಮತ್ತು ಸಂಶೋಧನೆಯನ್ನು ಹೆಚ್ಚು ಪರಿಣಾಮಕಾರಿ ಮಾಡಿ ಫಲಿತಾಂಶವನ್ನು ಸುಲಭವಾಗಿಸುವ ಸಾಮರ್ಥ್ಯವನ್ನು ನೀಡುತ್ತಿದೆ. ಈ ಯುಗದ ಬದಲಾವಣೆಗಳಿಗೆ ನಾವು ಹೊಂದಿಕೊಂಡು ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಸಂಬಂಧಿತ ಸವಾಲುಗಳನ್ನು ಪರಿಹರಿಸುವ ಮೂಲಕ, ಆರೋಗ್ಯ ರಕ್ಷಣೆಯನ್ನು ಮುನ್ನಡೆಸಲು ಕ್ಲಿನಿಕಲ್ ಸಂಶೋಧನೆಯ ಭವಿಷ್ಯವು ಉತ್ತಮ ಭರವಸೆಯನ್ನು ಹೊಂದಿದೆ ಎಂದು ಹೇಳಿದರು.
ಕ್ಲಿನಿಕಲ್ ಸಂಶೋಧನೆಯು ಭವಿಷ್ಯದ ಡಿಜಿಟಲ್ ರೂಪಾಂತರ ಆಧುನಿಕವಾಗಿ ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯಲ್ಲಿನ ಪ್ರಮುಖ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ, ಇದು ಕ್ಲಿನಿಕಲ್ ಸಂಶೋಧನೆಯನ್ನು ಹೇಗೆ ನಡೆಸಲಾಗುತ್ತದೆ ಮತ್ತು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನಗಳು ಮತ್ತು ಡೇಟಾಗಳು ಈ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿಖರವಾಗಿ ಫಲಿತಾಂಶ ನೀಡುತ್ತಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಿಜಿಟಲ್ ಯುಗ ಪ್ರಾರಂಭವಾಗಿದೆ. ಇದರಿಂದಾಗಿ ಅತೀ ಕ್ಲಿಷ್ಟಕರವಾದ ಆಪರೇಷನ್‌ಗಳನ್ನು ನಿರ್ವಹಿಸುವಲ್ಲಿ ಮನುಷ್ಯ ಸಹಜ ತಪ್ಪುಗಳನ್ನು ತಪ್ಪಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ರೊಬೋಟ್‌ಗಳನ್ನು ಗಣಕಯಂತ್ರದ ಮುಖಾಂತರ ನಿರ್ವಹಿಸಿ, ನಿಯಂತ್ರಿಸಿ ಆಪರೇಷನ್ ಪ್ರಕ್ರಿಯೆಯನ್ನು ಸುಲಭ ಗೊಳಿಸಲಾಗುತ್ತದೆ. ಮನುಷ್ಯ ಸಹಜವಾದ ಬಳಲಿಕೆ, ವಿಶ್ರಾಂತಿ ಇವು ಯಾವುದರ ತೊಂದರೆ ಇಲ್ಲದೆ ರೊಬೋಟಿಕ್ ಸರ್ಜರಿ ಮಾಡಲು ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಕಾರಿಯಾಗಿದೆ. ರೋಗದ ಪತ್ತೆ ಹಚ್ಚುವಿಕೆಯಲ್ಲಿ ಮತ್ತು ರೋಗದ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ಬಹಳ ಮುಖ್ಯಪಾತ್ರವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಫಾರ್ಮಕೋವಿಜಿಲನ್ಸ ಕನ್ಸಲ್ಟೆಂಟ್, ಕ್ಲಿನೆಕ್ಸಲ್ ಯು ಕೆ ನ ಮಿಸ್ ಪೂನಮ್ ಕುಮಾರಿ, ಎಸ್ ಸಿ ಆರ್ ಎಂ ಪಿಯ ಮಹ್ಮದ್ ಗಯೂರ್ ಖಾನ್, ಗ್ಲೋಬಲ್ ಕ್ಲೀನಿಕಲ್ ಟ್ರೈಲ್ ಮ್ಯಾನೇಜರ್ ನಿಖೀಲ್ ಭಾನುಮತಿ, ಡಾ ವಿವೇಕ ಗುಪ್ತಾ, ಡಾ ಉಮಾಮಾ ಯಜಧಾನಿ, ರಿಂಪಿ ಸೈನಿ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಸಂಚಾಲಕರಾದ ಅನಿಲಕುಮಾರ ಮರಗೋಳ, ಸಾಯಿನಾಥ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ ನಾಗೇಂದ್ರ ಮಂಠಾಳೆ, ಡಾ।ಮಹಾದೇವಪ್ಪ ರಾಂಪೂರೆ,ಡಾ।ಅನಿಲಕುಮಾರ ಪಟ್ಟಣ, ಡಾ।ಕಿರಣ್ ದೇಶಮುಖ್ , ನಾಗಣ್ಣ ಘಂಟಿ,ಡಾ ಗುರುಲಿಂಗಪ್ಪ ಪಾಟೀಲ್ ನಿರ್ದೇಶಕರಾದ ಅಶೋಕ್ ಕುಮಾರ್ ದಸ್ತಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ ಪ್ರಕಾಶ್ ಸರಸಂಬಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ವಾಣಿ ಬಬಲಾದಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಬಸವರಾಜ ಬೆಂಡಗುಂಬಳಿ ವಂದಿಸಿದರು.