
ಬೆಂಗಳೂರು: ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ನೇಮಕ ಮಾಡಿರುವುದನ್ನು ಸ್ವಾಗತಿಸುವುದಾಗಿ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ. ತನಿಖೆ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ ಅವರು, ಆದರೆ ತನಿಖೆಗೂ ಮುನ್ನವೇ ಕೆಲವರು ತನಿಖೆ ನಡೆಸಿ ತೀರ್ಪು ಕೊಡುವ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಧರ್ಮಸ್ಥಳ ಎಂಬ ಸಂಸ್ಥೆಯನ್ನೇ ಅನುಮಾನಿಸುವ, ಮುಖ್ಯಸ್ಥರನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸುವ ಷಡ್ಯಂತ್ರದ ವಿರುದ್ಧ ನಾವಿದ್ದೇವೆ,” ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು. ಧರ್ಮಸ್ಥಳ ಟ್ರಸ್ಟ್ ಚೋಳರ ಕಾಲದ 293 ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದೆ. ಅಲ್ಲದೆ, 55 ಲಕ್ಷ ಸ್ವಯಂಸೇವಾ ಸಂಘಗಳ ಸದಸ್ಯರು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು.
“900 ಕೆರೆಗಳ ಜೀರ್ಣೋದ್ಧಾರ ಕೆಲಸವನ್ನು ಮಾಡಿದೆ. ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಅಥವಾ ವಿಚಾರಣೆ ಇಲ್ಲದೆ ಗಲ್ಲಿಗೇರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆಯೂ ಇದನ್ನು ಹೀಗೇ ಮುಂದುವರಿಸಿದರೆ ನಾವು ಬಿಡುವುದಿಲ್ಲ. ಸಜ್ಜನರ ಮೌನ ದುರ್ಜನರಿಗೆ ದಾರಿಯಾಗುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ,” ಎಂದು ಸಿ.ಟಿ. ರವಿ ಬಲವಾಗಿ ಹೇಳಿದರು.