
ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಿಂದೂ ದೇವಸ್ಥಾನದ ಆಡಳಿತ ಜೈನ ಕುಟುಂಬದ ಕೈಯಲ್ಲೇಕಿದೆ ಎಂಬ ಸಾಮಾಜಿಕ ಮಾಧ್ಯಮಗಳ ಚರ್ಚೆಗಳಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವತಃ ಸ್ಪಷ್ಟೀಕರಣ ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದು ವಿವರಿಸಿದ್ದಾರೆ.
ಕರಾವಳಿಯ ಬಹುಕಾಲದ ಸಂಪ್ರದಾಯ
“ಜೈನರಾಗಿ ಹಿಂದೂ ದೇವಾಲಯವನ್ನು ಮುನ್ನಡೆಸುವುದು ಯಾವುದೇ ವಿವಾದಾತ್ಮಕ ವಿಷಯವಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಳೆಯ ಸಂಪ್ರದಾಯ. ಇಲ್ಲಿ ಜೈನ ಕುಟುಂಬಗಳು ಹಲವು ಹಿಂದೂ ದೇವಾಲಯಗಳನ್ನು ನಿರ್ವಹಿಸುತ್ತಿವೆ” ಎಂದು ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿ ಜೈನ ಅಥವಾ ಹಿಂದೂ ಎಂಬ ಭೇದವಿಲ್ಲದೆ ಎಲ್ಲರೂ ದೇವರ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ಪದ್ಧತಿಯು ಎಂದಿಗೂ ಸಮಸ್ಯೆ ಉಂಟುಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇತ್ತೀಚಿನ ಆರೋಪಗಳ ಹೊರತಾಗಿಯೂ, ದೇವಸ್ಥಾನದ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಭಕ್ತರ ನಂಬಿಕೆ ಬಲವಾಗಿದೆ. ಕೆಲ ಯುವಕರು ತಪ್ಪು ಮಾಹಿತಿಯಿಂದ ಪ್ರಭಾವಿತರಾಗಬಹುದಾದರೂ, ಭಕ್ತ ಸಮೂಹದ ನಂಬಿಕೆಯಲ್ಲಿ ಯಾವುದೇ ಬದಲಾಗಿಲ್ಲ ಎಂದು ಹೆಗ್ಗಡೆ ತಿಳಿಸಿದರು.