
ಬೆಂಗಳೂರು : ಧರ್ಮಸ್ಥಳದ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆಯಿಂದ ಆ ಕ್ಷೇತ್ರದ ಮೇಲಿನ ಜನರ ವಿಶ್ವಾಸ ಇನ್ನಷ್ಟು ಬಲಗೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಕ್ಕೆ ಬಂದ ವಿರೋಧಕ್ಕೂ ಸಚಿವರು ತಿರುಗೇಟು ನೀಡಿದರು.
ಧರ್ಮಸ್ಥಳ ಎಸ್‌ಐಟಿ: ರಾಜಕೀಯ ನಾಟಕ ಬೇಡ
ಯಾವುದೇ ಸರ್ಕಾರದ ಅವಧಿಯಲ್ಲಿ ಆರೋಪಗಳು ಬಂದಾಗ ಎಸ್‌ಐಟಿ ತನಿಖೆ ನಡೆಸುವುದು ಅನಿವಾರ್ಯ. ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗುತ್ತದೆ. ಬಿಜೆಪಿ ಪಕ್ಷವು ಆರಂಭದಲ್ಲಿ ಎಸ್‌ಐಟಿ ರಚನೆಯನ್ನು ಸ್ವಾಗತಿಸಿ, ಈಗ ನಾಟಕ ಮಾಡುತ್ತಿದೆ ಎಂದು ಸಚಿವ ಪಾಟೀಲ್ ಟೀಕಿಸಿದರು. “ಈ ತನಿಖೆಯಿಂದ ಧರ್ಮಸ್ಥಳದ ಮೇಲಿನ ವಿಶ್ವಾಸ ಇನ್ನಷ್ಟು ಹೆಚ್ಚಾಗಲಿದೆ” ಎಂದು ಅವರು ಸ್ಪಷ್ಟಪಡಿಸಿದರು.
ದಸರಾ ಉದ್ಘಾಟನೆ ವಿವಾದಕ್ಕೆ ಸಚಿವರ ಪ್ರತಿಕ್ರಿಯೆ
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದಕ್ಕೆ ಬಿಜೆಪಿಯ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಬಾನು ಮುಷ್ತಾಕ್‌ಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಭಾತೃತ್ವ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಇಂತಹ ಆಹ್ವಾನಗಳು ಅಗತ್ಯ. ಬಿಜೆಪಿಯವರು ಈ ವಿಚಾರದ ಬಗ್ಗೆ ಮಾತನಾಡುವ ಬದಲು, ರಾಜ್ಯದ ತೆರಿಗೆ ಪಾಲು ಮತ್ತು ಎರಡನೇ ವಿಮಾನ ನಿಲ್ದಾಣದಂತಹ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲಿ” ಎಂದು ತಿರುಗೇಟು ನೀಡಿದರು.
ಬಾನು ಮುಷ್ತಾಕ್ ಜೀವನ ಚರಿತ್ರೆ ಪುಸ್ತಕ ಪ್ರಕಟ
ಕನ್ನಡ ಪುಸ್ತಕ ಪ್ರಾಧಿಕಾರವು ಬಾನು ಮುಷ್ತಾಕ್ ಅವರ ಜೀವನ ಚರಿತ್ರೆ ಬೂಕರ್ ಬಾನು ಮುಷ್ತಾಕ್: ಬಾನು ಮುಷ್ತಾಕರ ಬದುಕು ಬರಹ
ಎಂಬ ಪುಸ್ತಕವನ್ನು ಪ್ರಕಟಿಸಲು ನಿರ್ಧರಿಸಿದೆ. ಲೇಖಕ ಬಿ. ಶಿವಾನಂದ್ ಬರೆದಿರುವ ಈ ಕೃತಿಯನ್ನು ಮೈಸೂರು ದಸರಾ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದ್ದಾರೆ.