
ಬೆಂಗಳೂರು: ಧರ್ಮಸ್ಥಳ ಪ್ರಕರಣದ ಹಿಂದೆ ರಾಜ್ಯ ಸರ್ಕಾರವೇ ದೊಡ್ಡ ಸಂಚು ರೂಪಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಬಹಿರಂಗಪಡಿಸದಿದ್ದರೆ, ಸೋಮವಾರದಿಂದ ವಿಧಾನ ಸಭೆ ಕಲಾಪಗಳು ಸುಗಮವಾಗಿ ನಡೆಯಲು ಬಿಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಎಚ್ಚರಿಕೆ ನೀಡಿದ್ದಾರೆ.
ಕೆಂಗೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಶೋಕ, ರಾಜ್ಯದಾದ್ಯಂತ ಪ್ರತಿದಿನ ಸಾವಿರಾರು ಪ್ರಕರಣಗಳು ದಾಖಲಾಗುತ್ತವೆ. ಹಲವಾರು ಪ್ರಕರಣಗಳಲ್ಲಿ ವಿರೋಧ ಪಕ್ಷವಾದ ನಾವು ಸಿಬಿಐ ಅಥವಾ ಎಸ್‍ಐಟಿ ತನಿಖೆಗೆ ಒತ್ತಾಯಿಸಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ನಮ್ಮ ಬೇಡಿಕೆಗೆ ಕಿವಿಗೊಡಲಿಲ್ಲ. ಈಗ ಏಕಾಏಕಿ ಧರ್ಮಸ್ಥಳ ಪ್ರಕರಣದಲ್ಲಿ ಎಸ್‍ಐಟಿ ರಚನೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಿರ್ಧಾರದ ಹಿಂದೆ ಯಾರ ಪ್ರಭಾವ ಇದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುತ್ತುವರೆದಿರುವ ‘ಟಿಪ್ಪು ಗ್ಯಾಂಗ್’ನ ಒತ್ತಡದಿಂದಾಗಿಯೇ ಈ ಎಸ್‍ಐಟಿ ರಚನೆಯಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ನಾವು ಎಸ್‍ಐಟಿಯ ಮಧ್ಯಂತರ ವರದಿಯನ್ನು ಕೇಳಿದ್ದೆವು. ಆದರೆ, ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರು ಧರ್ಮಸ್ಥಳದ ವಿರುದ್ಧ ಸಂಚು ನಡೆದಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಈ ಸಂಚನ್ನು ಮಾಡಿದವರು ಯಾರು ಎಂಬ ವಿವರವನ್ನು ಅವರು ನೀಡಿಲ್ಲ. ಹಾಗಾಗಿ, ಸೋಮವಾರ ವಿಧಾನ ಸಭೆಯಲ್ಲಿ ಸರ್ಕಾರ ಈ ಸಂಚಿನ ಸಂಪೂರ್ಣ ವಿವರವನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ನನಗೆ ಭಾನುವಾರ ಚಬ್ಬಿಯಲ್ಲಿ ಒಂದು ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ನಾನು ಧರ್ಮಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ, ಆ ದಿನ ಬರಲು ಸಾಧ್ಯವಾಗದ ನಮ್ಮ ಶಾಸಕರ ಜೊತೆಗೆ ಕುಟುಂಬ ಸಮೇತ ಇನ್ನೊಂದು ದಿನ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತೇನೆ ಎಂದು ಅಶೋಕ ಅವರು ತಿಳಿಸಿದರು.