
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ಪತ್ರ ಬರೆದಿದ್ದಾರೆ. ಈ ಗಂಭೀರ ಆರೋಪದ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ಕಂಡುಕೊಳ್ಳುವಂತೆ ಮತ್ತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಆರೋಪ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ಎಮ್‌ಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಅವರನ್ನೇ ತನಿಖೆಗೆ ಒಳಪಡಿಸುವಂತೆ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮೃತದೇಹಗಳನ್ನು ತಾನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಆರೋಪಿಸಿರುವುದು ರಾಜ್ಯದಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಈ ಅನಾಮಧೇಯ ವ್ಯಕ್ತಿ ಜೊತೆಗೆ ಸಮೀರ್, ಮಹೇಶ್ ಶೆಟ್ಟಿ ತಿಮರೋಡಿ, ಮತ್ತು ಗಿರೀಶ್ ಮಟ್ಟಣ್ಣನವರ್ ಎಂಬ ವ್ಯಕ್ತಿಗಳು ಕೂಡಾ ಇದೇ ಆರೋಪಗಳನ್ನು ಮಾಡುತ್ತಿದ್ದಾರೆ. ಈ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸ್ನೇಹಮಯಿ ಕೃಷ್ಣ, ಈ ಪ್ರಕರಣದ ತನಿಖೆಯನ್ನು ಶೀಘ್ರಗತಿಯಲ್ಲಿ ನಡೆಸಿ, ಸಾಕ್ಷಿಗಳನ್ನು ಸಂಗ್ರಹಿಸಿ, ಸತ್ಯಾಸತ್ಯತೆಯನ್ನು ಜನರಿಗೆ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.