
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ತಲೆಬುರುಡೆ ಪತ್ತೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ (ವಿಶೇಷ ತನಿಖಾ ದಳ) ಇದೀಗ ಹೊಸ ದಿಕ್ಕಿನಲ್ಲಿ ಹೆಜ್ಜೆ ಇರಿಸಿದೆ. ಅನಾಥ ಶವಗಳ ಸತ್ಯಾಂಶವನ್ನು ಪತ್ತೆಹಚ್ಚಲು ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಮಹತ್ವದ ವರದಿಯನ್ನು ಕೇಳಿದೆ.
15 ವರ್ಷಗಳ ದಾಖಲೆ ಕೇಳಿದ ಎಸ್‌ಐಟಿ
ಜುಲೈ 31ರಂದು ‘ಮಾಸ್ಕ್‌ಮ್ಯಾನ್’ ತೋರಿಸಿದ್ದ ಆರನೇ ಪಾಯಿಂಟ್‌ನಲ್ಲಿ ಕೆಲವು ಮೂಳೆಗಳು ದೊರಕಿದ ಹಿನ್ನೆಲೆಯಲ್ಲಿ, ಎಸ್‌ಐಟಿ ತಂಡವು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದೆ. ಅದರಂತೆ, 1985 ರಿಂದ 2000ರ ವರೆಗೆ ಧರ್ಮಸ್ಥಳದಲ್ಲಿ ಎಲ್ಲೆಲ್ಲಿ ಅನಾಥ ಶವಗಳನ್ನು ಹೂತಿದ್ದು, ಯಾವ ಸಂದರ್ಭದಲ್ಲಿ ಎಷ್ಟು ಶವಗಳನ್ನು ಹೂತಿಡಲಾಗಿದೆ ಎಂಬ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದೆ.
ರುದ್ರಭೂಮಿ ಕುರಿತೂ ಮಾಹಿತಿ ಸಂಗ್ರಹ
ಈ ಅವಧಿಯಲ್ಲಿ ಧರ್ಮಸ್ಥಳದಲ್ಲಿ ರುದ್ರಭೂಮಿ ಮಂಜೂರಾಗಿದ್ದು ಯಾವಾಗ? ಅದಕ್ಕೂ ಮೊದಲು ಕಂದಾಯ ಇಲಾಖೆಯಿಂದ ಯಾವ ಸ್ಥಳಗಳಲ್ಲಿ ಹೆಣಗಳನ್ನು ಹೂತಿಡಲಾಗುತ್ತಿತ್ತು ಎಂಬ ಸಂಪೂರ್ಣ ವರದಿ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಎಸ್‌ಐಟಿ ಸೂಚನೆ ನೀಡಿದೆ. ಪಂಚಾಯಿತಿಯಿಂದ ವರದಿ ಇಂದು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ವರದಿಯು ತನಿಖೆಯಲ್ಲಿ ಮಹತ್ವದ ಸುಳಿವು ನೀಡುವ ನಿರೀಕ್ಷೆಯಿದೆ.