
ಮಂಗಳೂರು: ಧರ್ಮಸ್ಥಳಕ್ಕೆ ತೆರಳಿದ್ದ ತನ್ನ ಮಗಳು ನಾಪತ್ತೆಯಾಗಿದ್ದಳು ಎಂದು ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದ ಸುಜಾತ ಭಟ್ ಅವರಿಗೆ ಇದೀಗ ವಿಶೇಷ ತನಿಖಾ ದಳ (ಎಸ್ಐಟಿ) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ನಕಲಿ ಫೋಟೋ ಬಳಕೆಯ ಆರೋಪ
ಈ ಹಿಂದೆ, ಸುಜಾತ ಭಟ್ ಅವರು ತನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ, ಆಕೆಯ ಫೋಟೋವನ್ನು ಬಿಡುಗಡೆ ಮಾಡಿದ್ದರು. ಆದರೆ ಆ ಫೋಟೋ ಬೇರೆ ಯುವತಿಯೊಬ್ಬರದು ಎಂದು ಆರೋಪಿಸಿ ಆಕೆಯ ಸಹೋದರ ದೂರು ನೀಡಿದ್ದರು. ಈ ಘಟನೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡವು ಈ ಕುರಿತು ಗಂಭೀರ ತನಿಖೆ ಆರಂಭಿಸಿದೆ.
ಬೆಂಗಳೂರಿನಲ್ಲಿ ನೋಟಿಸ್ ಜಾರಿ
ಪ್ರಕರಣದ ಸತ್ಯಾಂಶ ಬಯಲಿಗೆಳೆಯಲು ಮುಂದಾಗಿರುವ ಎಸ್‌ಐಟಿ, ಸುಜಾತ ಭಟ್ ಅವರಿಗೆ ಬೆಳ್ತಂಗಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ. ಬೆಳ್ತಂಗಡಿ ಕಚೇರಿಯ ಸಿಬ್ಬಂದಿ ಬೆಂಗಳೂರಿಗೆ ತೆರಳಿ ನೇರವಾಗಿ ಸುಜಾತ ಭಟ್ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಸ್ವೀಕರಿಸಿರುವ ಸುಜಾತ ಭಟ್, ಶೀಘ್ರದಲ್ಲೇ ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ, ಎಸ್‌ಐಟಿ ಅಧಿಕಾರಿಗಳು ಶಿವಮೊಗ್ಗ, ಬೆಂಗಳೂರು ಮತ್ತು ಉಡುಪಿ ಸೇರಿದಂತೆ ವಿವಿಧ ಕಡೆಗಳಲ್ಲಿ ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈ ಮಾಹಿತಿಗಳನ್ನು ಆಧರಿಸಿ ಸುಜಾತ ಭಟ್ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದ್ದು, ವಿಚಾರಣೆ ಬಳಿಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ.