
ಮಂಗಳೂರು : ರಾಜ್ಯಾದ್ಯಂತ ಗಮನ ಸೆಳೆದಿದ್ದ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿರುವಾಗಲೇ, ರಾಜ್ಯ ಮಹಿಳಾ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ.
ಮತ್ತೊಮ್ಮೆ ಮಾಹಿತಿ ಕೋರಿದ ಮಹಿಳಾ ಆಯೋಗ
ಈ ಹಿಂದೆ, ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೂ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಿತ್ತು. ಇದೀಗ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಪೊಲೀಸ್ ಕಮಿಷನರ್ ಅವರಿಗೆ ಮತ್ತೊಂದು ಪತ್ರ ಬರೆದು ಕೆಲವು ಪ್ರಮುಖ ಮಾಹಿತಿಗಳನ್ನು ಕೋರಿದ್ದಾರೆ.
ಪತ್ರದಲ್ಲಿ, 1990ರಿಂದ ಇಲ್ಲಿಯವರೆಗೆ ಧರ್ಮಸ್ಥಳ ಭಾಗದಲ್ಲಿ ನಾಪತ್ತೆಯಾಗಿರುವ ಹಾಗೂ ಅಸಹಜ ಸಾವುಗಳಿಗೆ ತುತ್ತಾಗಿರುವ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳು ಮತ್ತು ಮಹಿಳೆಯರ ವಿವರಗಳನ್ನು ಕೇಳಲಾಗಿದೆ. ಈ ಹಿಂದೆಯೂ ಈ ಕುರಿತು ಮಾಹಿತಿ ಕೇಳಿದಾಗ ಪೊಲೀಸ್ ಇಲಾಖೆ 2005ರಿಂದ ಮಾತ್ರ ವಿವರಗಳನ್ನು ಒದಗಿಸಿತ್ತು. ಆದ್ದರಿಂದ, ಮಹಿಳಾ ಆಯೋಗವು ಈ ಬಾರಿ ನಿರ್ದಿಷ್ಟವಾಗಿ 1990ರಿಂದ 2005ರವರೆಗಿನ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಸೂಚಿಸಿದೆ.