
ಶಿವಮೊಗ್ಗ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಎಸ್‌ಐಟಿ ಶೋಧ ಕಾರ್ಯದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗದಿರುವ ನಡುವೆ, ದೂರುದಾರರಾದ ಸುಜಾತಾ ಭಟ್ ಅವರ ಬಗ್ಗೆ ಕೆಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ದೂರುದಾರರು ಹೇಳಿದ ಅನನ್ಯಾ ಭಟ್ ಪಾತ್ರವೇ ಕಟ್ಟುಕಥೆಯಿರಬಹುದೇ ಎಂಬ ಅನುಮಾನಕ್ಕೆ ಇದು ಕಾರಣವಾಗಿದೆ.
ರಿಪ್ಪನ್‌ಪೇಟೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ
ಪ್ರಕರಣದ ದೂರುದಾರರಾದ ಸುಜಾತಾ ಭಟ್ ಅವರು ತಾವು ಹಿಂದೆ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ವಾಸವಾಗಿದ್ದಾಗಿ ಹೇಳಿದ್ದಾರೆ. ಆದರೆ, ಅಲ್ಲಿನ ಸ್ಥಳೀಯರ ಪ್ರಕಾರ, 1999 ರಿಂದ 2007ರವರೆಗೆ ಅವರು ಪ್ರಭಾಕರ್ ಬಾಳಿಗ ಎಂಬವರೊಂದಿಗೆ ಸುಮಾರು 18 ವರ್ಷಗಳ ಕಾಲ ವಾಸವಾಗಿದ್ದರು. ಆದರೆ, ಈ ಅವಧಿಯಲ್ಲಿ ಅವರಿಗೆ ಮಕ್ಕಳೇ ಇರಲಿಲ್ಲ. ಬದಲಿಗೆ ಅವರು ನಾಯಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಸುಜಾತಾ ಭಟ್ ಹಾಗೂ ಪ್ರಭಾಕರ್ ಬಾಳಿಗ ಲಿವಿಂಗ್-ಟುಗೆದರ್ ಸಂಬಂಧದಲ್ಲಿದ್ದರು. ಅವರು ಅಕ್ಕಪಕ್ಕದ ಜನರೊಂದಿಗೆ ಮತ್ತು ಬ್ರಾಹ್ಮಣ ಸಮುದಾಯದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಇವರಿಬ್ಬರಿಗೆ ಮಗಳು ಇದ್ದಿರುವುದನ್ನು ತಾವು ನೋಡಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ. ಈ ಹೊಸ ಮಾಹಿತಿ, ದೂರುದಾರರು ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.