
ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಮೃತದೇಹಗಳನ್ನು ಹೂತಿದ್ದಾಗಿ ಆರೋಪಿಸಿದ್ದ ‘ಮಾಸ್ಕ್ ಮ್ಯಾನ್’ನನ್ನು ವಿಶೇಷ ತನಿಖಾ ದಳ (ಎಸ್ಐಟಿ) ಬಂಧಿಸಿದೆ. ಆತನ ನಿಜವಾದ ಹೆಸರು ಸಿ.ಎನ್. ಚಿನ್ನಯ್ಯ ಎಂದು ತಿಳಿದುಬಂದಿದೆ. ಈ ಹಿಂದೆ ಆತನನ್ನು ‘ಭೀಮ’ ಎಂದೂ ಕರೆಯಲಾಗಿತ್ತು.
ಸುಳ್ಳು ಆರೋಪದಿಂದ ಬಂಧನ
1995 ರಿಂದ 2014 ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ ಚಿನ್ನಯ್ಯ, ಲೈಂಗಿಕ ದೌರ್ಜನ್ಯಕ್ಕೊಳಗಾದ ಮತ್ತು ಕೊಲೆಯಾದ ಮಹಿಳೆಯರು ಹಾಗೂ ಮಕ್ಕಳ ಮೃತದೇಹಗಳನ್ನು ತಾನೇ ಹೂತಿರುವುದಾಗಿ ಆರೋಪಿಸಿದ್ದ. ಈತನ ಹೇಳಿಕೆ ಆಧರಿಸಿ ಎಸ್‌ಐಟಿ ತನಿಖೆ ನಡೆಸಿದರೂ ಯಾವುದೇ ಮೃತದೇಹಗಳ ಸುಳಿವು ಸಿಕ್ಕಿರಲಿಲ್ಲ. ಕೇವಲ ಎರಡು ಕಡೆಗಳಲ್ಲಿ ಮೂಳೆಗಳು ಪತ್ತೆಯಾಗಿದ್ದವು.
ಇದರಿಂದ ಅನುಮಾನಗೊಂಡ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಚಿನ್ನಯ್ಯನನ್ನು ತೀವ್ರ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯ ವೇಳೆ ಆತನ ಆರೋಪಗಳು ಸುಳ್ಳು ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಚಿನ್ನಯ್ಯನನ್ನು ಬಂಧಿಸಿದ್ದಾರೆ.
ಪ್ರಸ್ತುತ, ಬಂಧಿತ ಸಿ.ಎನ್. ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ.