
ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ,ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಯಂತ್ರವನ್ನು ಬಳಸಿದರೂ ಇದುವರೆಗೆ ಕಳೇಬರ ಪತ್ತೆಯಾಗಿಲ್ಲ.
ಇಂದು (ಜುಲೈ 29) ಬೆಳಗ್ಗೆ 12:30ಕ್ಕೆ ಆರಂಭವಾದ ಅಗೆಯುವ ಕೆಲಸವು, 12 ಮಂದಿ ಪೌರಕಾರ್ಮಿಕರ ಸಹಾಯದಿಂದ ಪಿಕ್ಕಾಸು ಮತ್ತು ಹಾರೆಯನ್ನು ಬಳಸಿ ಮಧ್ಯಾಹ್ನ 2:30ರವರೆಗೆ ನಡೆಯಿತು. ಆದಾಗ್ಯೂ, ಮೃತದೇಹದ ಸುಳಿವು ಸಿಗಲಿಲ್ಲ. ಕಳೇಬರ ಅಲ್ಲೆಲ್ಲೂ ಸಿಗದಿದ್ದಾಗ, ದೂರುದಾರರು ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು.
ಮಿನಿ ಹಿಟಾಚಿ ಬಳಕೆ, ಮಳೆಯಿಂದ ತೊಡಕು
ತನಿಖಾಧಿಕಾರಿ ಅನುಚೇತ್ ಅವರ ಸೂಚನೆಯಂತೆ ಮಿನಿ ಹಿಟಾಚಿಯನ್ನು ಕರೆಸಲಾಯಿತು. ಮಧ್ಯಾಹ್ನ 3:30ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ಇದುವರೆಗೂ ನಿಂತಿಲ್ಲ. ನಿರಂತರ ಕಾರ್ಯಾಚರಣೆಯಿಂದ ಆ ಪ್ರದೇಶವು ದೊಡ್ಡ ಹೊಂಡದ ರೂಪವನ್ನು ಪಡೆದುಕೊಂಡಿದೆ.
ಅನಾಮಿಕ ವ್ಯಕ್ತಿಯು ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು, ಹಾಗೂ ಮಳೆಯಿಂದಾಗಿ ಹೊಂಡದಲ್ಲಿ ಒರತೆ ನೀರು ತುಂಬುತ್ತಿರುವುದರಿಂದ ಕಾರ್ಯಾಚರಣೆಗೆ ತೀವ್ರ ತೊಡಕಾಗಿದೆ. ಸತತ ಒಂದು ತಾಸಿಗೂ ಹೆಚ್ಚು ಕಾಲ ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗದಿರುವುದು ಪ್ರಕರಣವನ್ನು ಮತ್ತಷ್ಟು ಕುತೂಹಲಕಾರಿಯನ್ನಾಗಿಸಿದೆ.