
ನವದೆಹಲಿ : ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅನಾರೋಗ್ಯದ ಕಾರಣದಿಂದ ಧನ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ವಿಪಕ್ಷಗಳ ನಾಯಕರಾದ ಜೈರಾಮ್ ರಮೇಶ್ ಅವರು ʻದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಉಪರಾಷ್ಟ್ರಪತಿ ದಿಢೀರ್ ರಾಜೀನಾಮೆ ನೀಡಿರುವುದು ಅನುಮಾನಾಸ್ಪದವಾಗಿದೆ. ಸರ್ಕಾರ ಅವರ ಧ್ವನಿಯನ್ನು ಉದ್ದೇಶಪೂರ್ವಕವಾಗಿ ಅಡಗಿಸುವ ಕೆಲಸ ಮಾಡಿದೆʼ ಎಂದು ಆರೋಪಿಸಿದ್ದರು. ಇದಕ್ಕೆ ಉತ್ತರವಾಗಿ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, “ಧನ್ಕರ್ ಅವರ ರಾಜೀನಾಮೆ ಪತ್ರದಲ್ಲಿ ಆರೋಗ್ಯದ ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ತಮ್ಮ ಹುದ್ದೆ ಮತ್ತು ಅವಧಿಯ ಬಗ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ” ಎಂದು ಹೇಳಿದರು.
“ಧನ್ಕರ್ ಅವರಂತಹ ಸಾಂವಿಧಾನಿಕ ಹುದ್ದೆ ಹೊಂದಿದ್ದ ವ್ಯಕ್ತಿಯ ಬಗ್ಗೆ ಊಹಾಪೋಹ ಅನಗತ್ಯ. ಸತ್ಯ ಮತ್ತು ಸುಳ್ಳಿನ ವ್ಯಾಖ್ಯಾನಗಳು ಕೇವಲ ವಿರೋಧ ಪಕ್ಷಗಳ ಆರೋಪಗಳ ಮೇಲೆ ಅವಲಂಬಿತವಾಗಬಾರದು” ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು.